ಕಾಬೂಲ್: ಕಳೆದ ಹಲವು ದಿನಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮತ್ತು ಅಫ್ಘಾನ್ ಪಡೆಗಳ ನಡುವೆ ನಡೆಯುತ್ತಿದ್ದ ಸಂಘರ್ಷ ಅಂತಿಮ ಹಂತಕ್ಕೆ ತಲುಪಿದ್ದು, ತಾಲಿಬಾನಿಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಎಲ್ಲಾ ದಿಕ್ಕುಗಳಿಂದಲೂ ಸುತ್ತುವರೆದಿದ್ದು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ಅಫ್ಘಾನ್ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಏತನ್ಮಧ್ಯೆ, ಅಧಿಕಾರ ಹಸ್ತಾಂತರ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಅಧ್ಯಕ್ಷ ಅಶ್ರಫ್ ಘನಿ ಅವರು ದೇಶ ತೊರೆದಿದ್ದಾಗಿ ಅಫ್ಘಾನಿಸ್ತಾನದ ಸುದ್ದಿ ಸಂಸ್ಥೆ ಟೋಳೊ ವರದಿ ಮಾಡಿದೆ. ನೆರೆಯ ತಾಜಿಕಿಸ್ತಾನ್ ಗೆ ಅವರ ಆಪ್ತರೊಂದಿಗೆ ಪಲಾಯನಗೈದಿರುವುದಾಗಿ ಆಂತರಿಕ ಸಚಿವಾಲಯದ ವಕ್ತಾರರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಕಾಬೂಲ್ನಲ್ಲಿರುವ ತನ್ನ ರಾಯಭಾರಿಗಳನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರ ಮಾಡಿದೆ. ಆಡಳಿತವನ್ನು ಮಧ್ಯಂತರ ಅವಧಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸರ್ಕಾರದ ಸಚಿವರು ತಿಳಿಸಿದ್ದಾರೆ. ತಾಲಿಬಾನಿಗಳು ಎಲ್ಲ ಕಡೆಗಳಿಂದ ಕಾಬೂಲ್ಗೆ ಬರುತ್ತಿದ್ದಾರೆ ಎಂದು ಹಿರಿಯ ಆಂತರಿಕ ಸಚಿವಾಲಯದ ಅಧಿಕಾರಿಗಳು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಪಡೆಗಳ ಸಹಕಾರದೊಂದಿಗೆ ಸೇನೆ ನಗರವನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿದೆ ಎಂದು ಆಫ್ಘನ್ ಅಧ್ಯಕ್ಷೀಯ ಕಚೇರಿಯ ಟ್ವಿಟ್ಟರ್ ಖಾತೆ ತಿಳಿಸಿದೆ.
ಆದರೆ ತಮ್ಮ ಹೋರಾಟಗಾರರಿಗೆ ಕಾಬೂಲ್ ದ್ವಾರದಲ್ಲಿಯೇ ಇರುವಂತೆ, ನಗರದ ಒಳಗೆ ಪ್ರವೇಶಿಸದಂತೆ ಸೂಚನೆ ನೀಡಲಾಗಿದೆ. ಕಾಬೂಲ್‌ನಲ್ಲಿ ಹಿಂಸಾಚಾರ ನಡೆಸಬಾರದು. ಹೊರಗೆ ಹೋಗಲು ಬಯಸುವ ಯಾವುದೇ ವ್ಯಕ್ತಿ ಸುರಕ್ಷಿತವಾಗಿ ಹೊರ ಸಾಗಲು ಅವಕಾಶ ನೀಡಬೇಕು. ಮಹಿಳೆಯರು ಸಂರಕ್ಷಿತ ಪ್ರದೇಶದಲ್ಲಿ ಇರಬೇಕು ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.
ನಾವು ಕಾಬೂಲ್ ಅನ್ನು ಶಾಂತಿಯುತವಾಗಿ ನಮಗೆ ಹಸ್ತಾಂತರಿಸುವಂತೆ ಕೇಳಿಕೊಳ್ಳುತ್ತೇವೆ. ನಾವು ಸಂಪೂರ್ಣವಾಗಿ ಅಧಿಕಾರ ವಹಿಸಿಕೊಂಡಾಗ ಒಬ್ಬನೇ ಒಬ್ಬ ಅಮಾಯಕ ಅಫ್ಘಾನ್ ನಾಗರಿಕ ಗಾಯಗೊಳ್ಳುವುದು ಅಥವಾ ಸಾಯುವುದು ನಮಗೆ ಇಷ್ಟವಿಲ್ಲ. ಆದರೆ ನಾವು ಕದನವಿರಾಮ ಘೋಷಣೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ರಾಜಧಾನಿ ಕಾಬೂಲ್ ಮೇಲೆ ದಾಳಿ ನಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಆಂತರಿಕ ಸಚಿವ ಅಬ್ದುಲ್ ಸತ್ತಾರ್ ಮಿರ್ಜಾಕ್ವಲ್, ಭದ್ರತಾ ಪಡೆಗಳು ಕಾಬೂಲ್ ನಾಗರಿಕರನ್ನು ರಕ್ಷಿಸಲಿದ್ದಾರೆ ಎಂದು ಖಾತರಿ ನೀಡಿದ್ದಾರೆ.
20 ವರ್ಷಗಳ ಬಳಿಕ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಅಲಿ ಅಹಮದ್ ಜಲಾಲಿಯನ್ನು ನೂತನ ಸರ್ಕಾರದ ಮುಖ್ಯಸ್ಥರಾಗಿ ನೇಮಿಸಲಾಗಿದೆ.
ಇದಕ್ಕೂ ಮುನ್ನ ತಾಲಿಬಾನಿ ಉಗ್ರರು ಕಾಬೂಲ್ ನಿಂದ 40 ಕಿ.ಮೀ. ದೂರದಲ್ಲಿರುವ ವರ್ದಾಕ್ ಪ್ರಾಂತ್ಯದಲ್ಲಿರುವ ಮೈದಾನ್ ಶೆಹರ್ ಅನ್ನು ವಶಕ್ಕೆ ಪಡೆದಿದ್ದು, ಹಲವು ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದರು. ಈಗಾಗಲೇ ತಾಲಿಬಾನಿಗಳು ಅಫ್ಘಾನಿಸ್ತಾನದ ಬಹುತೇಕ ಭಾಗವನ್ನು ವಶಪಡಿಸಿಕೊಂಡು ಆಫ್ಘನ್ ಪಡೆಗಳಿಗೆ ಸೋಲುಣಿಸಿದ್ದರು.
ಅಮೆರಿಕ ಸೇನೆ ಮತ್ತು ನ್ಯಾಟೋ ಪಡೆಗಳು ಅಫ್ಘಾನಿಸ್ತಾನದಿಂದ ವಾಪಸ್ ತೆರಳಿದ ಬಳಿಕ ತಾಲಿಬಾನಿಗಳು ಆಫ್ಘನ್ ನ ಹಲವು ಪ್ರಾಂತ್ಯಗಳು ಮತ್ತು ನಗರಗಳನ್ನು ಒಂದೊಂದಾಗಿ ವಶಪಡಿಸಿಕೊಂಡು ಆಫ್ಘನ್ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.