ಕೊಪ್ಪಳ: ಆ. 15:- ‘ಭಾರತವು ಸ್ವಾತಂತ್ರ ಪಡೆದು 75 ವರ್ಷಗಳು ಸಂದರೂ ಕೂಡ ಬಹುತೇಕ ಭಾರತೀಯರು ಇಂದು ನಿರುದ್ಯೋಗ, ಅಕ್ರಮ, ಅನೀತಿ, ಅನಾಚಾರ, ಭಯೋತ್ಪಾದನೆಯನ್ನು ಎದುರಿಸುತ್ತಿದ್ದಾರೆ. ಕೆಲವು ರಾಜಕಾರಣಿಗಳು ಸ್ವಪಕ್ಷದ ಲಾಭಕ್ಕಾಗಿ ಕೋಮು ವಿಷಬೀಜವನ್ನು ಬಿತ್ತಿ ಸೌಹಾರ್ದ, ಭಾವೈಕ್ಯತೆಯ ಮನಸ್ಸುಗಳನ್ನು ಒಡೆಯುತ್ತಿದ್ದಾರೆ. ಭಾರತದಲ್ಲಿ ವೈವಿಧ್ಯಮಯವಾದ ಜಾತಿ, ಮತ, ಪಂಥ, ಪಂಗಡಗಳೆಲ್ಲವೂ ಶಾಂತಿಯನ್ನೇ ಪ್ರತಿಪಾದಿಸುತ್ತದೆಯೇ ಹೊರತು ಅಶಾಂತಿ, ಅಹಿಂಸೆಯನ್ನು ಸಾರುವುದಿಲ್ಲ. ಕೋಮುಭಾಷಣ ಮಾಡಿ ಜನರಲ್ಲಿ ಅಶಾಂತಿ ಸೃಷ್ಟಿಸುವವರಿಗೂ, ಅವರ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಇದನ್ನು ಅರಿತು ಎಲ್ಲರೂ ಎಚ್ಚರದಿಂದಿರಬೇಕು ಎಂದು ‘ಮಸ್ ದರ್ ಎಜ್ಯು ಆಂಡ್ ಚಾರಿಟಿ’ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಮೌಲಾನಾ ಸಿದ್ದೀಕ್ ಸಖಾಫಿ ಬಾಜಾರ್ ಹೇಳಿದರು.
ನಗರದ ಸಿರಸಪ್ಪಯ್ಯನ ಮಠದ ಹತ್ತಿರ ಮಸ್ ದರ್ ಎಜ್ಯು ಅಂಡ್ ಚಾರಿಟಿ ಸಂಸ್ಥೆಯಿಂದ 75ನೇ ಸ್ವತಂತ್ರೋತ್ಸವದ ಧ್ವಜಾರೋಹಣ ಸಮಾರಂಭದಲ್ಲಿ ಅವರು ಮುಖ್ಯ ಭಾಷಣಗಾರರಾಗಿ ಮಾತನಾಡಿ, ‘ಭಾರತದಲ್ಲಿ ಮುಸ್ಲಿಮ್ ರಾಜರು ಸುಮಾರು 600ಕ್ಕೂ ಹೆಚ್ಚು ವರ್ಷಗಳು ಆಳ್ವಿಕೆ ಮಾಡಿದರೂ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲಿಲ್ಲ. ಬ್ರಿಟಿಷರು ಇನ್ನೂರು ವರ್ಷ ಆಳ್ವಿಕೆ ಮಾಡಿದರೂ ಕ್ರೈಸ್ತ ರಾಷ್ಟ್ರ ಮಾಡಲಿಲ್ಲ. ಎಲ್ಲಾ ಜನಾಂಗಗಳನ್ನು ಒಳಗೊಂಡು ಎಲ್ಲರೂ ಸೌಹಾರ್ದತೆಯಿಂದ ಬದುಕಲು ಪ್ರಜಾಪ್ರಭುತ್ವ ರಾಷ್ಟ್ರವನ್ನು ಕಟ್ಟಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ’ ಎಂದು ಹೇಳಿದರು.
ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್. ಎ. ಗಫಾರ್ ಮಾತನಾಡಿ, ‘ಮಸ್ ದರ್ ಎಜ್ಯು ಅಂಡ್ ಚಾರಿಟಿ ಸಂಸ್ಥೆಯಿಂದ ಬಡಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಜೊತೆಗೆ ಎಲ್ಲರೂಂದಿಗೆ ಬೆರೆತು 75ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವುದು ಸಂತೋಷದ ಸಂಗತಿ’ ಎಂದು ಹೇಳಿದರು.
ಮಸ್ ದರ್ ಎಜ್ಯು ಅಂಡ್ ಚಾರಿಟಿ ಸಂಸ್ಥೆಯ ನಿರ್ದೇಶಕರಾದ ಅಫ್ಸರ್ ಹುಸೇನ್ ಅತ್ತಾರ್ ಧ್ವಜಾರೋಹಣ ಮಾಡಿದರು. ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್. ಎಸ್. ಎಫ್) ರಾಜ್ಯ ಸಮಿತಿ ಸದಸ್ಯರಾದ ಸಲೀಂ ಅಳವಂಡಿ, ನಗರ ಘಟಕದ ಉಪಾಧ್ಯಕ್ಷ ಗೌಸ್ ನೀಲಿ, ರಿಯಾಝ್ ಮಂಗಳಾಪುರ, ಸಂಸ್ಥೆಯ ಅಧ್ಯಾಪಕರಾದ ಮುಸ್ತಫಾ ಮುಈನಿ, ಅಬೂಬಕ್ಕರ್ ಮಆಲಿ, ಕರೀಮ್ ರಬ್ಬಾನಿ ಇನ್ನಿತರರು ಉಪಸ್ಥಿತರಿದರು. ನೌಫಲ್ ಮರ್ಝೂಖಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.