janadhvani

Kannada Online News Paper

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ- ಅಮೃತ’ ಯೋಜನೆಗಳನ್ನು ಘೋಷಿಸಿದ ಸಿಎಂ

ಬೆಂಗಳೂರು,ಆ.15: ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ತೆರೆದ ಜೀಪ್‌ನಲ್ಲಿ ಸಿಎಂ ಬೊಮ್ಮಾಯಿ ಪರೇಡ್ ಪರಿವೀಕ್ಷಣೆ ಮಾಡಿದರು. ಗೌರವ ರಕ್ಷೆ ಸ್ವೀಕಾರ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯ ಕೋರಿದರು. ಇದೇ ವೇಳೆ ಹಲವು ಹೊಸ ‘ಅಮೃತ’ ಯೋಜನೆಗಳನ್ನು ಘೋಷಿಸಿದರು.

ಅಮೃತ ಗ್ರಾಮೀಣ ವಸತಿ ಯೋಜನೆ

ಸ್ವಾತಂತ್ರ್ಯೋತ್ಸವದಂದು ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai)ಯವರು ಅಮೃತ ಗ್ರಾಮೀಣ ವಸತಿ ಯೋಜನೆ ಘೋಷಿಸಿದ್ದಾರೆ. ಆಯ್ದ 750 ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ವಸತಿ ರಹಿತ, ಆಶ್ರಯರಹಿತರನ್ನು ಗುರುತಿಸಿ ವಸತಿ ಸೌಲಭ್ಯ ಕಲ್ಪಿಸಲಾಗುವುದು.

ಅಮೃತ ರೈತ ಉತ್ಪಾದಕ ಸಂಸ್ಥೆ ಯೋಜನೆ

ಅಮೃತ ರೈತ ಉತ್ಪಾದಕ ಸಂಸ್ಥೆ ಯೋಜನೆಯನ್ನು ಸಿಎಂ ಘೋಷಿಸಿದ್ದಾರೆ. ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆಗೆ ಮತ್ತು ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು ಸಂಸ್ಥೆಗಳನ್ನು ಆರಂಭಿಸಲಾಗುತ್ತಿದೆ. 750 ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಈ ಯೋಜನೆಯಡಿ ಸ್ಥಾಪಿಸಲಾಗುವುದು. ಪ್ರತಿ ಸಂಸ್ಥೆಗೆ 30 ಲಕ್ಷ ರೂ.ನಂತೆ 3 ವರ್ಷ ನೀಡಲಾಗುವುದು. ಇದಕ್ಕಾಗಿ 225 ಕೋಟಿ ರೂ. ಅನುದಾನ ನೀಡಲಾಗುವುದು ಅಂತಾ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಅಮೃತ ಗ್ರಾಮ ಪಂಚಾಯಿತಿ ಯೋಜನೆ

ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಆಯ್ದ 750 ಗ್ರಾಮ ಪಂಚಾಯಿಗಳಲ್ಲಿ ಬೀದಿ ದೀಪಗಳು, ಪ್ರತಿಯೊಂದು ಮನೆಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಶೇ.100ರಷ್ಟು ಘನತಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್, ಡಿಜಿಟಲ್ ಗ್ರಂಥಾಲಯಗಳೊಂದಿಗೆ ಶಾಲೆ ಸ್ಥಾಪನೆ ಮತ್ತು ಸಮಗ್ರ ಮೂಲಸೌಕರ್ಯದೊಂದಿಗೆ ಶಾಲೆಗಳ(School) ಮತ್ತು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಅಮೃತ ಸ್ವಸಹಾಯ ಕಿರು ಉದ್ದಿಮೆ ಘೋಷಣೆ
ಸಿಎಂ ಬಸವರಾಜ್ ಬೊಮ್ಮಾಯಿಯವರು ಅಮೃತ ಸ್ವಸಹಾಯ ಕಿರು ಉದ್ದಿಮೆ ಘೋಷಿಸಿದರು. ಇದರಿಂದ 7,500 ಸ್ವಸಹಾಯ ಗುಂಪುಗಳು ಉದ್ದಿಮೆಗಳಾಗಿ ಬದಲಾಗಲಿವೆ. ಕಿರು ಉದ್ಯಮ ಸಂಸ್ಥೆಗಳಾಗಿ ರೂಪಿಸಲು ತಲಾ 1 ಲಕ್ಷ ರೂ. ಅನುದಾನ ನೀಡಲಾಗುವುದು ಅಂತಾ ಸಿಎಂ ತಿಳಿಸಿದ್ದಾರೆ.

ಅಮೃತ ನಿರ್ಮಲ ನಗರ ಯೋಜನೆ

ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಸಿಎಂ ಬೊಮ್ಮಾಯಿ ಅಮೃತ ನಿರ್ಮಲ ನಗರ ಯೋಜನೆ ಘೋಷಿಸಿದರು. ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವುದು ಅಮೃತ ನಿರ್ಮಲ ನಗರ ಯೋಜನೆಯ ಉದ್ದೇಶವಾಗಿದೆ. ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ. ಅನುದಾನ ನೀಡಲಾಗುವುದು. ಇದಕ್ಕಾಗಿ ಒಟ್ಟು 75 ಕೋಟಿ ರೂ. ಒದಗಿಸಲಾವುದು ಎಂದು ಸಿಎಂ ತಿಳಿಸಿದ್ದಾರೆ.

ಅಮೃತ ಶಾಲಾ ಸೌಲಭ್ಯ ಯೋಜನೆ

ಸಿಎಂ ಬಸವರಾಜ್ ಬೊಮ್ಮಾಯಿ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಅಮೃತ ಶಾಲಾ ಸೌಲಭ್ಯ ಯೋಜನೆಯನ್ನೂ ಘೋಷಿಸಿದ್ದಾರೆ. ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಸೇರಿದಂತೆ ಸಮಗ್ರ ಸೌಲಭ್ಯವನ್ನು ಈ ಯೋಜನೆಯಡಿ ಒದಗಿಸಲಾಗುವುದು. 750 ಶಾಲೆಗಳಿಗೆ ತಲಾ 10 ಲಕ್ಷ ರೂ. ನೀಡಲಾಗುವುದು. ಇದಕ್ಕಾಗಿ ಒಟ್ಟು 75 ಕೋಟಿ ರೂ. ವೆಚ್ಚ ಮಾಡಲಾಗುವುದು ಅಂತಾ ತಿಳಿಸಿದ್ದಾರೆ.

750 ಅಂಗನವಾಡಿ ಕೇಂದ್ರಗಳು ಮೇಲ್ದರ್ಜೆಗೆ

ಅಮೃತ ಅಂಗನವಾಡಿ ಯೋಜನೆಯಡಿ 750 ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಪ್ರತಿ ಅಂಗನವಾಡಿಗೆ 1 ಲಕ್ಷ ರೂ. ನೀಡಲಾಗುವುದು. ಇದಕ್ಕಾಗಿ 7.5 ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ತಿಳಿಸಿದ್ದಾರೆ.

error: Content is protected !! Not allowed copy content from janadhvani.com