ಬೆಂಗಳೂರು,ಆ. 15: ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಉಳಿದಿರುವ 20 ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡುತ್ತೇವೆ. ಇವತ್ತಿನಿಂದ ನವಕರ್ನಾಟಕ ಆಗುತ್ತದೆಂದು ಘೋಷಣೆ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹಣದ ಬಳಿಕ ಮಾಡಿದ ತಮ್ಮ ಭಾಷಣದಲ್ಲಿ ಅವರು ಕರ್ನಾಟಕದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದರು. ಸಿಎಂ ಆಗಿ ಕನ್ನಡಿಗರಿಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಜನರು ಹಾಗೂ ತಮ್ಮ ಹಿರಿಯರಿಗೆ ತಾನು ಚಿರ ಋಣಿಯಾಗಿರುತ್ತೇನೆ. ತನ್ನ ನಮನವನ್ನು ಅಂಬೇಡ್ಕರ್ ಅವರಿಗೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
ಅಭಿವೃದ್ಧಿಮಂತ್ರದೊಂದಿಗೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕ್ರಮಿಸಿದ ಅಭಿವೃದ್ಧಿ ಪಥದಲ್ಲಿಯೇ ಮುಂದುವರಿಯುವ ಸಂಕಲ್ಪ ಮಾಡಿದ್ದೇನೆ. ಸರ್ಕಾರ ಒಂದು ನಿರಂತರ ಪ್ರಕ್ರಿಯೆ. ಅದರಲ್ಲಿ ಪಾತ್ರಧಾರಿಗಳು ಬದಲಾದರೂ ಆಡಳಿತ ಯಂತ್ರ ನಿಲ್ಲಬಾರದು. ಅದರಂತೆ ಅಭಿವೃದ್ಧಿಚಕ್ರವನ್ನು ಮುನ್ನಡೆಸಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ವಿಶ್ವಾಸಾರ್ಹ, ದಕ್ಷ, ಪ್ರಾಮಾಣಿಕ, ಪಾರದರ್ಶಕ, ಜನಸ್ನೇಹಿ ಆಡಳಿತ ನೀಡುವುದು ತಮ್ಮ ಸರ್ಕಾರದ ಆದ್ಯತೆ. ನಿಗದಿತ ಅವಧಿಯೊಳಗೆ ಯೋಜನೆ ಅನುಷ್ಠಾನ, ಜನಪರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನಮ್ಮ ಸರ್ಕಾರದ ಧ್ಯೇಯವಾಗಿದೆ. ಯೋಜನೆಗಳು ಕೇವಲ ಕಾಗದದ ಮೇಲೆ ಉಳಿಯದೇ ಸಮರ್ಪಕವಾಗಿ ಮತ್ತು ಸಕಾಲದಲ್ಲಿ ಅನುಷ್ಠಾನಗೊಂಡು ಅವುಗಳ ಪ್ರತಿಫಲಗಳು ಜನತೆಗೆ ತಲುಪಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ದೃಢಸಂಕಲ್ಪದ ಪರಿಣಾಮವಾಗಿ ಹಾಗೂ ನಿಕಟಪೂರ್ವ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಇವತ್ತಿಂದ ನವಕರ್ನಾಟಕ ಆಗಲಿದೆ ಎಂದು ನಾನು ಘೋಷಣೆ ಮಾಡುತ್ತೇನೆ. ಈಗ 20 ತಿಂಗಳು ಮಾತ್ರ ಅಧಿಕಾರ ಇದೆ. ಇಷ್ಟು ದಿನದಲ್ಲಿ ಯಾವುದು ಮಾಡಬಹುದು ಅದನ್ನು ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಂಕಲ್ಪ ತೊಟ್ಟರು.
ಅಭಿವೃದ್ಧಿ ಸುತ್ತಲೂ ಜನರು ಇರಬೇಕು. ಜನರ ಸುತ್ತ ಅಭಿವೃದ್ಧಿ ಇರಬಾರದು. ಯಾವುದೇ ಸರ್ಕಾರಿ ಕಚೇರಿ ಸುತ್ತ ಜನರು ಸುತ್ತಬಾರದು. ಜನರು ಬಂದರೆ ಅವರ ಕೆಲಸ ಬೇಗ ಮಾಡಲು ಕ್ರಮ ವಹಿಸುತ್ತೇವೆ. ಜನರು ತಮ್ಮ ಕೆಲಸಗಳಿಗೆ ಅಲೆದಾಡುವುದನ್ನು ತಪ್ಪಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತನ ಶ್ರಮದಲ್ಲಿ, ಕೂಲಿಕಾರನ ಬೆವರಲ್ಲಿ ದೇವರಿದ್ದಾನೆ. ರಾಜ್ಯದ ಜನರನ್ನ ಮನಸ್ಸಲ್ಲಿಟ್ಟುಕೊಂಡು ಜನರ ಬಾಗಿಲಿಗೆ ಕಾರ್ಯಕ್ರಮಗಳನ್ನ ತೆಗೆದುಕೊಂಡು ಹೋಗುತ್ತೇನೆ. ಅವರ ಬದುಕನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡುತ್ತೇನೆ. ನನ್ನ ಕನ್ನಡನಾಡಿನ ಪ್ರತಿಯೊಂದು ಕುಟುಂಬ, ಅವರ ಬದುಕು ಬೆಳವಣಿಗೆ ಆಗಬೇಕು. ಶಿಕ್ಷಣ ಆರೋಗ್ಯ ನೆಮ್ಮದಿ ಪ್ರತಿಯೊಂದು ಸಿಗಬೇಕು ಅನ್ನೋದನ್ನ ಮನಸ್ಸಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.