janadhvani

Kannada Online News Paper

ರಾಜ್ಯದಲ್ಲಿ ಸದ್ಯಕ್ಕೆ ಲಾಕ್‌ಡೌನ್ ಇಲ್ಲ- ಸಿಎಂ ಬೊಮ್ಮಾಯಿ

ಬೆಂಗಳೂರು,ಆ.14: ಕೋವಿಡ್ ಮೂರನೇ ಅಲೆ ನಿಯಂತ್ರಣ ಸಂಬಂಧ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್ ತಾಂತ್ರಿಕ ತಜ್ಞರು, ಅಧಿಕಾರಿಗಳೊಂದಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಗಂಭೀರ ಚರ್ಚೆ ನಡೆಸಿದರು. ಸದ್ಯ ಸೋಂಕು ನಿಯಂತ್ರಣದಲ್ಲಿದ್ದು, ಪ್ರಸ್ತುತ ರಾಜ್ಯದಲ್ಲಿರುವ ಈಗಿರುವ ನಿಯಮಗಳನ್ನೇ ಮುಂದುವರೆಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ನೈಟ್ ಕರ್ಫ್ಯೂ ಹಾಗೂ ಎಂಟು ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಇದನ್ನೆ ಮುಂದುವರೆಸಬೇಕು. ಹೊಸದಾಗಿ ಯಾವುದೇ ನಿಯಮಗಳಿಲ್ಲ. ಅ. 30ರವರೆಗೆ ಈಗ ಜಾರಿಯಲ್ಲಿರುವ ನಿಯಮಗಳನ್ನೇ ಸರಿಯಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ಎರಡನೇ ಅಲೆಯಲ್ಲಿ ಆದ ಅನಾಹುತ ಮೂರನೇ ಅಲೆಯಲ್ಲಿ ಅಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಯಿತು. ಜೊತೆಗೆ ಆಕ್ಸಿಜನ್ , ಐಸಿಯು ಬೆಡ್, ಆ್ಯಂಬುಲೆನ್ಸ್ , ಕೊರತೆ ಆಗದಂತೆ ಕ್ರಮ ಕೈಗೊಂಡು ಮೂರನೇ ಅಲೆಯ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳುವಂತೆ ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ.

ಮಕ್ಕಳ ಅಸ್ಪತ್ರೆಗೆ ಹೆಚ್ಚಿನ ಆದ್ಯತೆ ನೀಡುವಂತೆ‌ ಸೂಚನೆ ನೀಡಲಾಗಿತ್ತು. ಅನ್ಯ ರಾಜ್ಯಗಳ ಓಡಾಟದ ಮೇಲೆ ಹೆಚ್ಚಿನ‌ ನಿಗಾ ಇಡುವಂತೆ ತಿಳಿಸಲಾಗಿದೆ. ಅನ್ಯ ರಾಜ್ಯಗಳಿಂದ ಬರುವವರಿಗೆ ಗಡಿ ಪ್ರವೇಶದ ವೇಳೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು ಎಂದು ಸಿಎಂ ಸೂಚಿಸಿದರು. ಅಲ್ಲದೇ ಇದೇ ವೇಳೆ ಅವರು ಜಿಲ್ಲಾವಾರು ಕೋವಿಡ್ ನ ಅಂಕಿಅಂಶಗಳ ಮಾಹಿತಿಯನ್ನು ಪಡೆದರು.

ಪಾಸಿಟಿವ್ ದರವಿರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದ್ದು, ಸದ್ಯಕ್ಕೆ ಲಾಕ್ ಡೌನ್ ನಂತಹ ಕಠಿಣ ಕ್ರಮ ಬೇಡ. ಅಗತ್ಯಬಿದ್ದರೆ ಮಾತ್ರ ವಿಕೇಂಡ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಯೋಚಿಸೋಣ ಎಂದರು.

ಹಬ್ಬಗಳ ಸಾಲಿರುವ ಹಿನ್ನಲೆ ಹಬ್ಬದ ದಿನದಲ್ಲಿ ಜನ ಒಂದಡೆ ಸೇರದಂತೆ ಎಚ್ಚರವಹಿಸಬೇಕು. ಯಾವುದೇ ರೀತಿ ಜನರಿಗೆ ತೊಂದರೆಯಾಗಬಾರದು. ಹಬ್ಬಗಳ ಆಚರಣೆಗೆ ಈ ಹಿಂದಿನ ಮಾರ್ಗಸೂಚಿಗಳೇ ಮುಂದುವರಿಯಲಿದೆ. ರಾಜ್ಯದಲ್ಲಿ ಕೋವಿಡ್ ಪರೀಕ್ಷಾ ಸಂಖ್ಯೆಯನ್ನು ಹೆಚ್ಚು ಹೆಚ್ಚು ಮಾಡಿಸಬೇಕು ಜೊತೆಗೆ ಲಸಿಕೆ ವಿತರಣೆಗೂ ವೇಗ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಕೋವಿಡ್ ಅಲೆಯನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ಚರ್ಚೆ ನಡೆಸಲಾಯಿತು. ಎರಡನೇ ಅಲೆ ಕಡಿಮೆ ಆದರೂ ಪ್ರಕರಣ ಏರಿಕೆ ಕಂಡು ಬಂದಿದೆ. ಕೋವಿಡ್ ಸಂಬಂಧ ಸಭೆ ನಡೆದಿದೆ. ವೈಜ್ಞಾನಿಕವಾದ, ಅಂಕಿ ಅಂಶಗಳ ಸಮೇತ, ಅಂತರಾಷ್ಟ್ರೀಯ, ರಾಷ್ಟ್ರೀಯ ಟ್ರೆಂಡ್ ಬಗ್ಗೆ ಕೋವಿಡ್ ಸ್ಥಿತಿಗತಿ ಬಗ್ಗೆ ತಿಳಿಸಿದ್ದಾರೆ. ಟಾಸ್ಕ್ ಪೋರ್ಸ್ ಕಮಿಟಿ ಅಂಕಿ ಅಂಶ ನೀಡಿದೆ. ಕೇರಳ ಮತ್ತು ಮಹಾರಾಷ್ಟ್ರ ಕೊರೊನಾ ಸ್ಥಿತಿಗತಿ ಬಗ್ಗೆ ತಿಳಿಸಿದ್ದಾರೆ ಅವರ ಅನುಭವ ಅಂಕಿ ಅಂಶ ವಿವರಿಸಿದ್ದಾರೆ ಎಂದರು.

error: Content is protected !! Not allowed copy content from janadhvani.com