janadhvani

Kannada Online News Paper

ಹೊಡೆದಾಟಕ್ಕೆ ಆಹ್ವಾನ – ಶರಣ್ ಪಂಪ್‌ವೆಲ್ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯ

ಮಂಗಳೂರು: ಸಂಘಪರಿವಾರದ ನಾಯಕ ಶರಣ್ ಪಂಪ್‌ವೆಲ್‌‌‌‌‌ ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಮರ ವಿರುದ್ದ ಬಹಿರಂಗವಾಗಿ ಹಿಂಸೆಗೆ ಕರೆ ನೀಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು ಶರಣ್ ವಿರುದ್ದ ತಕ್ಷಣವೆ ಎಫ್‌ಐಆರ್‌ ದಾಖಲಿಸಬೇಕು ಎಂದು ಮುಖ್ಯಮಂತ್ರಿ ಮತ್ತು ರಾಜ್ಯದ ಡಿಜಿಪಿಯವರನ್ನು ಒತ್ತಾಯಿಸಲಾಗಿದೆ.

ಸೋಮವಾರದಂದು ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಶರಣ್ ಪಂಪ್‌ವೆಲ್, “ಮುಸ್ಲಿಂ ಸಮುದಾಯದ ನಾಯಕರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಮುಸ್ಲಿಂ ಯುವಕರಿಗೆ ಬುದ್ದಿ ಹೇಳಬೇಕು, ಲವ್‌ ಜಿಹಾದ್ ಪ್ರಕರಣ ಮುಂದುವರೆದರೆ ಬೀದಿಗಿಳಿದು ನೇರವಾಗಿ ಅವರ ವಿರುದ್ದ ಹೋರಾಟ ಮಾಡುತ್ತೇವೆ’’ ಎಂದು ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ಅಲ್ಲದೆ “ಕರಾವಳಿಯಲ್ಲಿ ಶಾಂತಿಯಿರಬೇಕಾದರೆ ಮುಸ್ಲಿಂ ನಾಯಕರು ತಮ್ಮ ಯುವಕರಿಗೆ ಎಚ್ಚರಿಕೆ ಕೊಡುವಂತಹ ಕೆಲಸ ಮಾಡಬೇಕು. ಹಿಂದೂ ಯುವತಿಯರನ್ನು ಸೆಕ್ಸ್‌ ದಂಧೆ ಮತ್ತು ಡ್ರಗ್ಸ್‌ ದಂಧೆಗೆ ಬಳಸಿಕೊಳ್ಳುತ್ತಿದ್ದೀರಿ.ಇಡೀ ಮುಸ್ಲಿಂ ಸಮುದಾಯ ಭಯೋತ್ಪಾದನೆಗೆ ಬೆಂಬಲ ಕೊಡುತ್ತಿದ್ದೀರ ಎಂಬ ಸಂಶಯವಿದೆ” ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ ಅದೇ ದಿನ ಮಾಧ್ಯಮಗಳಿಗೆ ನೀಡಿದ ಚುಟುಕು ಸಂದರ್ಶನಲ್ಲಿ, “ಮುಂದಿನ ದಿನಗಳಲ್ಲಿ ಹೋರಾಟವು ಆಗಬಹುದು ಅಥವಾ ಹೊಡೆದಾಟವು ಆಗಬಹುದು” ಎಂದು ಹಿಂಸಾಚಾರ ನಡೆಯಲಿದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶಗಳೆದ್ದಿದ್ದು, ಶರಣ್‌ ಪಂಪ್‌ವೆಲ್ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಗಳು ಕೇಳಿ ಬರುತ್ತಿದೆ. ‘ಹೇಟ್‌ ಸ್ಪೀಚ್‌ ಬೇಡ’ ಅಭಿಯಾನವು, “ಮಾನ್ಯರೆ, ಈ ರಾಜ್ಯದ ಪ್ರಜೆಗಳಾದ ನಮಗೆ ಶಿಕ್ಷಣ, ಆಹಾರ, ಮಹಿಳೆಯರ ಸುರಕ್ಷತೆ, ಸಾರ್ವಜನಿಕ ಸಾರಿಗೆ, ಆರೋಗ್ಯ ಬೇಕು. ನಾವು ಈ ಕೋಮುವಾದಿ ರಾಜಕೀಯವನ್ನು ತಿರಸ್ಕರಿಸುತ್ತೇವೆ. ಶರಣ್ ಪಂಪ್‌ವೆಲ್ ವಿರುದ್ಧ ನೀವು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ನಾವು ಬಯಸುತ್ತೇವೆ” ಎಂದು ಮುಖ್ಯಮಂತ್ರಿ ಮತ್ತು ರಾಜ್ಯದ ಡಿಜಿಪಿಗೆ ಆಗ್ರಹಿಸಿದೆ.

ಪರ್ಯಾಯ ಕಾನೂನು ವೇದಿಕೆಯ ಸಂಚಾಲಕರಾದ ವಿನಯ್‌ ಶ್ರೀನಿವಾಸ್ ಅವರು, “ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಕರ್ನಾಟಕದ ಡಿಜಿಪಿ ಅವರೇ, ಶರಣ್ ಪಂಪ್‌ವೆಲ್‌ ಸತ್ಯವನ್ನು ತಿರುಚುತ್ತಿದ್ದಾರೆ. ಅಲ್ಲದೆ ಮುಸ್ಲಿಮರ ವಿರುದ್ದ ಬಹಿರಂಗವಾಗಿ ಹಿಂಸೆಗೆ ಕರೆ ನೀಡುತ್ತಿದ್ದಾರೆ. ದಯವಿಟ್ಟು ಅವರ ವಿರುದ್ದ 153A, 295A, 505 (2) ಅಡಿಯಲ್ಲಿ ತಕ್ಷಣವೆ ಎಫ್ಐಆರ್ ಅನ್ನು ದಾಖಲಿಸಿರುವುದನ್ನು ಖಚಿತ ಪಡಿಸಿ” ಎಂದು ಕೇಳಿದ್ದಾರೆ.

ಶರಣ್ ಪಂಪ್‌ವೆಲ್ ಹಲವಾರು ಪಕ್ರರಣಗಳ ಆರೋಪಿಯಾಗಿದ್ದು, ಸದಾ ವಿವಾದಾತ್ಮಕವಾದ ಹೇಳಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ಈಗಿನ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಯಡಿಯೂರಪ್ಪರ ಸಂಪುಟದಲ್ಲಿ ಗೃಹಮಂತ್ರಿಯಾಗಿದ್ದಾಗ ಶರಣ್ ಪಂಪ್‌ವೆಲ್ ಮೇಲಿನ ಎಲ್ಲಾ ಕೇಸುಗಳನ್ನು ತೆಗೆಯುವುದಾಗಿ ಭರವಸೆ ನೀಡಿದ್ದು ವಿಡಿಯೊದಲ್ಲಿ ದಾಖಲಾಗಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು.

ಇದೀಗ ಬೊಮ್ಮಾಯಿ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸೋಮವಾರದಂದು ಪ್ರಸ್ತುತ ರಾಜ್ಯದ ಗೃಹಮಂತ್ರಿಯಾಗಿರುವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರ ವಿರುದ್ದ ಇರುವ ಪ್ರಕರಣಗಳನ್ನು ರದ್ದುಪಡಿಸುವಂತೆ ಕೇಳಿಕೊಂಡಿದ್ದಾರೆ.

ಬಿಜೆಪಿಯ ಹೊಸ ಸಂಪುಟ ರಚನೆಯಾಗುತ್ತಿದ್ದಂತೆ ಸಂಘಪರಿವಾರ ಮತ್ತು ಬಿಜೆಪಿಯ ಕಾರ್ಯಕರ್ತರ ವಿರುದ್ದದ ಪ್ರಕರಣಗಳನ್ನು ರದ್ದು ಪಡಿಸುವಂತೆ ಸಚಿವರೊಬ್ಬರೇ ಖುದ್ದಾಗಿ ಗೃಹ ಸಚಿವರಿಗೆ ಮನವಿ ಮಾಡುತ್ತಿದ್ದಾರೆ. ಇದರ ಜೊತೆಗೆ ಹಲವು ಪ್ರಕರಣಗಳ ಆರೋಪಿಯಾಗಿರುವ ಶರಣ್ ಪಂ‌ಪ್‌ವೆಲ್‌ ಬಹಿರಂಗವಾಗಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ, ಇದು ಏನನ್ನು ಪ್ರತಿಬಿಂಬಿಸುತ್ತದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.