ಬೆಂಗಳೂರು: ವಯಸ್ಸಿನ ಕಾರಣಕ್ಕೆ ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿದ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಗುಡುಗಿದ್ದಾರೆ. ಕೇರಳದಲ್ಲಿ 80 ವರ್ಷದ ಮುದಿಯನನ್ನು ಸಿಎಂ ಅಭ್ಯರ್ಥಿ ಮಾಡುತ್ತಾರೆ. ಆದರೆ ಇಲ್ಲಿ ವಯಸ್ಸಾಗಿದೆ ಎಂದು ಕಿತ್ತುಹಾಕುತ್ತಾರೆ ಎಂಬುದಾಗಿ ಅವರು ಕೇರಳ ವಿಧಾನಸಭೆ ಚುನಾವಣೆಯಲ್ಲಿ ‘ಮೆಟ್ರೋಮ್ಯಾನ್’ ಇ. ಶ್ರೀಧರನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದ ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಎಸ್ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಯಡಿಯೂರಪ್ಪ ಅವರಿಗೆ 75 ವರ್ಷ ವಯಸ್ಸು. ಅವರಿಗೆ ವಯಸ್ಸಾಯ್ತು ಅಂತ ಕಿತ್ತು ಹಾಕಿದ್ದಾರೆ. ಅವರಿಗೆ ಮದುವೆ ಮಾಡಿದರೆ ಎರಡು ಮಕ್ಕಳಾಗುತ್ತವೆ ಎಂದು ಚಟಾಕಿ ಹಾರಿಸಿದರು.
ಜುಲೈ-ಆಗಸ್ಟ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂದು ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೆ. ಆರೂವರೆ ಕೋಟಿ ಜನರಿರುವ ರಾಜ್ಯದಲ್ಲಿ ಇಂತಹ ಬದಲಾವಣೆ ಸಹಿಸುವುದಿಲ್ಲ. ಏಕಾಏಕಿ ರಾಜಕೀಯ ಒತ್ತಡ ಹಾಕಿ ಅಧಿಕಾರ ಹಿಂಪಡೆಯುವುದು ಸರಿಯಲ್ಲ ಎಂದು ಹೇಳಿದರು.
ಅಕ್ಟೋಬರ್‌ನಲ್ಲಿ ಅಲ್ಪಸಂಖ್ಯಾತರ ಸಭೆ ನಡೆಯಲಿದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಹೀರಾ-ಪೀರಾ ಸಭೆ ಕರೆದು ಚರ್ಚಿಸಲಾಗುವುದು.
ಯಡಿಯೂರಪ್ಪ ಲವಲವಿಕೆಯಿಂದ ಇದ್ದಾರೆ. ಅವರು ರಾಜ್ಯಪಾಲರ ಹುದ್ದೆ ತಿರಸ್ಕರಿಸಿದ್ದಾರೆ. ಕನ್ನಡಿಗರು ನೀಡುವವರು, ಬೇಡುವವರಲ್ಲ. ಯಡಿಯೂರಪ್ಪ ಅವರ ಮೇಲೆ ಆರೋಪಗಳಿರಬಹುದು. ಅದು ಬೇರೆ. ಅಧಿಕಾರದಲ್ಲಿ ಇದ್ದಾಗ ನಾನು ದೂರ ಇರುವ ಮನುಷ್ಯ. ಅವರು ರಾಜೀನಾಮೆ ನೀಡಿರುವುದರಿಂದ ಭೇಟಿ ಮಾಡಲು ಬಂದಿದ್ದೇನೆ ಎಂದರು.
ನಾನು ಏನು ಹೇಳಿದ್ದರೂ ಯಾರೂ ನಂಬುತ್ತಿರಲಿಲ್ಲ. ಈಗ ನನ್ನ ಸಿಕ್ಸ್ತ್ ಸೆನ್ಸ್ ಪ್ರಕಾರವೇ ನಡೆದಿದೆ. ಯಾರೇ ಸಿಎಂ ಆದರೂ ನಮ್ಮ ಜನರು ಒಪ್ಪುವುದಿಲ್ಲ. ನಾವು ಸಾಧು ಸಂತರ ಜತೆ ಇದ್ದವರು. ಮಠದ ಸ್ವಾಮಿಗಳು ಕಾವಿ ಹಾಕಿಕೊಂಡು ವಿದ್ಯೆ, ಅನ್ನ ನೀಡಿದ್ದಾರೆ. ಮಠದ ದಾಸೋಹಿ ನಾನು. ನಾನಿಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಬಂದಿಲ್ಲ. ರಾಜ್ಯದಲ್ಲಿ ಹೊಸ ಪರ್ವ ಶುರುವಾಗಲಿದೆ. ನಮ್ಮ ನಾಡು, ನೆಲ, ಜಲ, ನಮ್ಮ ನಾಯಕನನ್ನು ಆಯ್ಕೆ ಮಾಡುವ ಶಕ್ತಿ ನಮಗಿದೆ ಎಂದು ಹೇಳಿದರು.
ಯಡಿಯೂರಪ್ಪ ಅವರಿಗೆ ಆದ ಅವಮಾನ ಕರ್ನಾಟಕಕ್ಕೆ, ಕನ್ನಡಿಗರಿಗೆ ಆದ ಅವಮಾನ. ಯಡಿಯೂರಪ್ಪ ಅವರು ಈಗಲೂ ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದಾರೆ. ಅಮಿತ್ ಶಾ ಮತ್ತು ಯಡಿಯೂರಪ್ಪ ಅವರ ನಡುವೆ ರನ್ನಿಂಗ್ ರೇಸ್ ನಡೆಸಲಿ. ಯಾರಿಗೆ ವಯಸ್ಸಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.