ಮಂಗಳೂರು, ಜುಲೈ 26: ಅಶ್ಶಮಾಯಿಲುಲ್ ಮುಹಮ್ಮದಿಯ್ಯ ಆರು ತಿಂಗಳ ವಿಶೇಷ ಕೋರ್ಸಿನಲ್ಲಿ ವಿಜೇತರಾದ ದ್ವಿತೀಯ ಬ್ಯಾಚ್ ಗೆ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮವು ದಾರುಲ್ ಇರ್ಷಾದ್ ಎಜುಕೇಶನಲ್ ಸೆಂಟರ್ ಕೆ.ಜಿ.ಎನ್ ಮಿತ್ತೂರಿನಲ್ಲಿ ನಡೆಯಿತು.
ಉಡುಪಿ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಅವರು 37 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.
11 ವಿದ್ಯಾರ್ಥಿಗಳಿಗೆ ಶಾಮಿಲಿ ಪದವಿ ಹಾಗೂ 26 ವಿದ್ಯಾರ್ಥಿನಿಯರಿಗೆ ಶಾಮಿಲ ಪದವಿಯೊಂದಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಇದೇ ವೇಳೆ ಈ ತರಗತಿಯಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾದ ಪುರುಷರ ವಿಭಾಗದಲ್ಲಿ ಇಬ್ಬರಿಗೆ ಹಾಗೂ ಮಹಿಳೆಯರ ವಿಭಾಗದ ಇಬ್ಬರಿಗೆ ಮಾಣಿ ಉಸ್ತಾದ್ ಅವರು ಬಹುಮಾನ ನೀಡಿ ಹಾರೈಸಿದರು.
ಕಾರ್ಯಕ್ರಮವನ್ನು ದಾರುಲ್ ಇರ್ಶಾದ್ ಮೇನೇಜಿಂಗ್ ಡೈರೆಕ್ಟರ್ ಶೆರೀಫ್ ಸಖಾಫಿ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ರಾಜ್ಯ ಸುನ್ನೀ ಯುವಜನ ಸಂಘ ನಾಯಕ ಡಿ.ಕೆ. ಉಮರ್ ಸಖಾಫಿ ಕಂಬಳಬೆಟ್ಟು, ಅಶ್ಶಮಾಯಿಲ್ ಮುಹಮ್ಮದಿಯ್ಯ ವಿಶೇಷ ಕೋರ್ಸ್ ಅಧ್ಯಾಪಕ ಇಸ್ಮಾಈಲ್ ಸಅದಿ ಮಾಚಾರ್, ದಾರುಲ್ ಇರ್ಶಾದ್ ಸದರ್ ಮುಅಲ್ಲಿಂ ಅಬ್ದುಲ್ ರಝಾಕ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತರಿದ್ದರು.