ಬೆಂಗಳೂರು: ಇಂದು ರಾಜಭವನಕ್ಕೆ ತೆರಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಿ ಎಸ್ ಯಡಿಯೂರಪ್ಪ ಅವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿರುವುದಾಗಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುವುದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು, ಯಾರೇ ಆದರೂ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದರು. ಇದೇ ವೇಳೆ ಹೈಕಮಾಂಡ್ ಗೆ ಮತ್ತು ರಾಜ್ಯದ ಜನತೆಗೆ ಹಾಗೂ ವಿಶೇಷವಾಗಿ ಶಿಕಾರಿಪುರ ಜನತೆಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಇಂದು ಬಿಜೆಪಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಗದ್ಗಿತರಾಗಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ,ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ರಾಜಭವನಕ್ಕೆ ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡುತ್ತೇನೆ ಎಂದು ಹೇಳಿದ್ದರು.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದಕ್ಕೆ ಶಿಕಾರಿಪುರದ ಜನತೆ ನನ್ನನ್ನು ಏಳು ಭಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಕರ್ನಾಟಕದ ಜನತೆ ನನ್ನನ್ನು ಕೈಬಿಡಲಿಲ್ಲ. ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಎಂದು ಹೇಳಿದರು.
ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರಕ್ಕೆ ಅವಕಾಶ ಕೊಡಲ್ಲ ಆದರೆ ಜೆ.ಪಿ. ನಡ್ಡಾ ಅವರು ನನಗೆ 2 ವರ್ಷ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟರು. ಪ್ರಧಾನಿ ಮೋದಿ, ಅಮಿತ್ ಶಾ ಜೋಡಿ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಗೆದ್ದು ದೇಶವನ್ನು ಮುನ್ನಡೆಸುವ ಅವಕಾಶ ಸಿಗಬೇಕು ಎಂದರು.
ರಾಜೀನಾಮೆ ನೀಡುದಾಗಿ ಘೋಷಿಸುವ ವೇಳೆ ಯಡಿಯೂರಪ್ಪ ಭಾವುಕರಾಗಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸುತ್ತೇನೆ ಎಂದು ತಿಳಿಸಿದ ಅವರು, ದುಃಖದಿಂದ ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿಲ್ಲ. ಸಂತೋಷದಿಂದ ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವೆ ಎಂದು ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಒಮ್ಮೆಯೂ ಅವರು ಪೂರ್ಣ ಅವಧಿಯನ್ನು ಪೂರೈಸಿಲ್ಲ. ಅವರು ನಾಲ್ಕು ಬಾರಿಯಾಗಿ 5 ವರ್ಷ ಪೂರೈಸಿದ್ದಾರೆ.