ಬೆಂಗಳೂರು: ಜುಲೈ 26 ಅಂದರೆ ನಾಳೆಯಿಂದ ರಾಜ್ಯಾದ್ಯಂತ ಪದವಿ ಕಾಲೇಜುಗಳು ಆರಂಭವಾಗುತಿದ್ದು, ಲಸಿಕೆ ಪಡೆದ ವಿದ್ಯಾರ್ಥಿಗಳಷ್ಟೇ ಕಾಲೇಜಿಗೆ ಬರಲು ಅವಕಾಶವಿರುತ್ತದೆ. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಆರ್ಟಿಪಿಸಿಆರ್ (RTPCR) ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಯಾವುದೇ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ. ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರದಿದ್ದರೂ ಪ್ರಾಧ್ಯಾಪಕರು ಮಾತ್ರ ಕಡ್ಡಾಯವಾಗಿ ಹಾಜರಾಗಬೇಕು.
ಸುಮಾರು ಮೂರು ತಿಂಗಳ ಬಳಿಕ ಕಾಲೇಜುಗಳನ್ನು ತೆರೆಯಲಾಗುತ್ತಿದೆ. ಕಾಲೇಜುಗಳನ್ನ ಕಡ್ಡಾಯವಾಗಿ ತೆರೆಯಲು ವಿವಿಗಳು ಸೂಚನೆ ನೀಡಿವೆ. ಈಗಾಗಲೇ ಶೇ.75ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದ್ದು, ಶೀಘ್ರದಲ್ಲೇ ಬಾಕಿ ಉಳಿದ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಕೊವಿಡ್ ಮಾರ್ಗಸೂಚಿ ಅನುಸರಿಸಿ ನಾಳೆಯಿಂದ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಭೌತಿಕ ತರಗತಿ ಶುರು ಮಾಡಲಾಗುವುದು.
ಪದವಿ ಕಾಲೇಜುಗಳ ಪ್ರಾರಂಭಕ್ಕೆ ಮಾರ್ಗಸೂಚಿಗಳೇನು?
- ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು.
- ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶ ಇಲ್ಲ.
- ಸ್ವ ಇಚ್ಛೆಯಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು.
- ಕಾಲೇಜು ಪ್ರಾರಂಭವಾದರೂ ಆನ್ಲೈನ್ ತರಗತಿಗಳು ಎಂದಿನಂತೆ ನಡೆಯಲಿದೆ.
- ಅಧ್ಯಾಪಕರ ವರ್ಗ ಮತ್ತು ಸಿಬ್ಬಂದಿ ವರ್ಗ ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು.
- ಪ್ರತಿ ಕಾಲೇಜಿನಲ್ಲೂ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಯನ್ನು ಪಾಲಿಸಬೇಕು.
- ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು.
- ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಕಾಲೇಜು, ಕ್ಯಾಂಪಸ್ನಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
- ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಾಲೇಜು ಆಡಳಿತ ಮಂಡಳಿ ಕ್ರಮವಹಿಸಬೇಕು.
- ಕಾಲೇಜು, ವಿವಿ ಆವರಣದಲ್ಲಿ ಆರೋಗ್ಯ ಸಹಾಯವಾಣಿ ಪ್ರಾರಂಭ ಮಾಡಬೇಕು.
- ಕಾಲೇಜು, ವಿವಿಗಳಲ್ಲಿ ಈಜುಕೊಳಗಳ ಪ್ರಾರಂಭಕ್ಕೆ ನಿಷೇಧ.
- ಗ್ರಂಥಾಲಯಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು.
- ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು.