ಬೆಂಗಳೂರು: ಸದ್ಯ ಕೊರೋನಾ ಸೋಂಕಿನ ಪ್ರಮಾಣ ಸ್ವಲ್ಪಮಟ್ಟಿಗೆ ಹತೋಟಿಯಲ್ಲಿ ಇರುವುದರಿಂದ ಅನ್ಲಾಕ್ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಇಂದು ಸಚಿವರುಗಳ ಜೊತೆ ಸ್ವಗ್ರಹದಲ್ಲೇ ಸಭೆ ನಡೆಸಿದ್ರು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಡೆದ ಸಭೆಯಲ್ಲಿ ಸದ್ಯ ರಾಜ್ಯದ ಪರಿಸ್ಥಿತಿ ಹೇಗಿದೆ, ಕೆಲವು ನಿಯಮಗಳನ್ನು ಸಡಿಲ ಮಾಡಿದ್ದು ಪ್ರಯೋಜನವಾಗಿದೆಯಾ ಕೋವಿಡ್ ಸ್ಥಿತಿಗತಿ ಹೇಗಿದೆ ಎನ್ನುವುದರ ಬಗ್ಗೆ ವಿವರವಾಗಿ ಚರ್ಚಿಸಲಾಯ್ತು. ನಂತರ ಅನ್ಲಾಕ್ ನ ಮುಂದಿನ ಹಂತದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಸಚಿವರುಗಳಾದ ಅಶ್ವತ್ಥನಾರಾಯಣ್, ಆರ್ ಅಶೋಕ್, ಅರವಿಂದ ಲಿಂಬಾವಳಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.
ಇದರಂತೆ ಸಚಿವರು ಹಾಗು ಅಧಿಕಾರಿಗಳ ಜೊತೆ ಕೋವಿಡ್ -19 ರ ಕುರಿತು ಚರ್ಚೆ ನಡೆಸಿದ ನಂತರ ನೈಟ್ ಕರ್ಪ್ಯುನ್ನು ರಾತ್ರಿ 10 ರಿಂದ ಬೆಳಗ್ಗೆ 5 ರ ವರಗೆ ವಿಧಿಸಲು ತೀರ್ಮಾನಿಸಲಾಯಿತು. ಸಿನಿಮಾ ಥಿಯೇಟರ್, ರಂಗಮಂದಿರ 50 ಪರ್ಸೆಂಟ್ ತೆರೆಯಲು ಅವಕಾಶ ನೀಡಲು ತೀರ್ಮಾನಿಸಲಾಯಿತು. ದೀರ್ಘಕಾಲದ ನಂತರ ಸಿನಿಮಾ ಥಿಯೇಟರ್ಗಳು ತೆರೆಯುತ್ತಿವೆ. ಕೇವಲ ಅರ್ಧದಷ್ಟು ವೀಕ್ಷಕರಿಗೆ ಮಾತ್ರ ಅನುಮತಿ ಇದ್ದರೂ ಕೂಡಾ ಇದಕ್ಕೆ ದೊರಕುವ ಪ್ರತಿಕ್ರಿಯೆ ಮತ್ತು ಅಲ್ಲಿ ಕೋವಿಡ್ ನಿಯಮಗಳ ಪಾಲನೆಯ ಬಗ್ಗೆ ಗಮನಿಸಿ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಕುರಿತು ಚರ್ಚಿಸಲಾಯಿತು.
ಇದರೊಂದಿಗೆ ಬಹುಕಾಲದ ಬೇಡಿಕೆ ಎಂಬಂತೆ ಉನ್ನತ ಶಿಕ್ಷಣವನ್ನು ಜುಲೈ 26 ರಿಂದ ಪ್ರಾರಂಭ ಮಾಡಲು ಅವಕಾಶ ನೀಡಲಾಯಿತು. ಆದರೆ ಈ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನಿಷ್ಟ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪದವಿ ಮೇಲ್ಮಟ್ಟದ ಕಾಲೇಜುಗಳಿಗೆ ಮಾತ್ರ ಭೌತಿಕ ತರಗತಿಗಳನ್ನು ನಡೆಸಲು ಅನುಮತಿ ನೀಡಲಾಗುವುದು. ಮಾರ್ಗಸೂಚಿಯಲ್ಲಿ ಕಾಲೇಜುಗಳ ಕುರಿತ ಷರತ್ತುಗಳನ್ನು ತಿಳಿಸಲಾಗುವುದು. ಇನ್ನು ನೈಟ್ ಕರ್ಫ್ಯೂ ಅವಧಿಯಲ್ಲಿ ಒಂದು ಗಂಟೆ ಕಡಿತ ಮಾಡಲಾಗಿದ್ದು ರಾತ್ರಿ 9 ರ ಬದಲು 10 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಇರಲಿದೆ.
ಬಾರ್ ಗಳಲ್ಲಿ ಮಾತ್ರ ಮದ್ಯ ಸೇವನೆಗೆ ಇದ್ದ ಶೇ.50 ರ ಮಿತಿ ಮುಂದುವರಿಕೆಯಾಗಿದೆ. ನೈಟ್ ಕರ್ಫ್ಯೂ ಅವಧಿಯಲ್ಲಿ ಒಂದು ಗಂಟೆ ಕಡಿತ ಹಿನ್ನೆಲೆಯಲ್ಲಿ ಬಾರ್ ಗಳಲ್ಲಿ ಇನ್ಮುಂದೆ ರಾತ್ರಿ 10 ತನಕ ಮದ್ಯ ಸೇವನೆಗೆ ಅವಕಾಶ ದೊರೆಯಲಿದೆ. ಇನ್ನು ಪಬ್ ಗಳಲ್ಲಿ ಮದ್ಯ ಸೇವನೆ, ನೈಟ್ ಪಾರ್ಟಿಗಳಿಗೆ ಅವಕಾಶ ಇಲ್ಲ. ಒಳಾಂಗಣ ಚಿತ್ರೀಕರಣ ಮತ್ತು ಕ್ರೀಡಾಂಗಣಗಳಿಗೂ ಅನುಮತಿ ನೀಡಿಲ್ಲ. ಉಳಿದಂತೆ ಈ ಹಿಂದೆ ಇದ್ದ ಮದುವೆಗೆ 100 ಜನರ ಮಿತಿ, ಅಂತ್ಯ ಸಂಸ್ಕಾರಕ್ಕೆ 20 ಜನರ ಮಿತಿ ಮುಂದುವರಿಕೆಯಾಗಿದೆ. ಈ ಪ್ರಮುಖ ಸಭೆಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಗೈರಾಗಿದ್ದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.