ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮರವೂರು ಮುಖ್ಯ ರಸ್ತೆಯ ಬಳಿ ಪಿಲ್ಲರ್ ಜಗ್ಗಿ ಬಿರುಕು ಬಿಟ್ಟಿದ್ದ ಸೇತುವೆಯ ಪಿಲ್ಲರ್, ಸ್ಲ್ಯಾಬ್ ಅನ್ನು ಮೇಲಕ್ಕೆತ್ತಿ ಸೇತುವೆಯನ್ನು ಯಥಾ ಸ್ಥಿತಿಗೆ ತರಲಾಗಿದ್ದು, 2 ವಾರದೊಳಗೆ ಇನ್ನುಳಿದ ಸುರಕ್ಷಾ ಕ್ರಮಗಳನ್ನು ಪೂರೈಸಿ ಆಗಸ್ಟ್‌ನಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ನಿರೀಕ್ಷೆ ಇದೆ.
ಬೆಂಗಳೂರು ಮತ್ತು ಕೇರಳದ ತಂತ್ರಜ್ಞರ ಸಲಹೆ ಪಡೆದು ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸ್ಲ್ಯಾಬ್ ಮೇಲಕ್ಕೆತ್ತುವ ಕಾಮಗಾರಿ ಪೂರ್ಣಗೊಂಡಿದೆ. ಲೋಕೋಪಯೋಗಿ ಇಲಾಖೆಯ ಮಂಗಳೂರು ವಿಭಾಗವು ಗುತ್ತಿಗೆದಾರ ಸಂಸ್ಥೆ ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್‌ನ ಮೂಲಕ ಕಾಮಗಾರಿಯನ್ನು ನಿರ್ವಹಿಸಿದೆ ಎಂದು ಪಿಡಬ್ಯು ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಆತ್ರಾಡಿ ರಾಜ್ಯ ಹೆದ್ದಾರಿ -67ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯ ಮರವೂರು ಬಳಿ ಫಲ್ಗುಣಿ ನದಿಗೆ 54 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆಯ ಕೊನೆಯ ಪಿಲ್ಲರ್ ಜೂನ್ 15ರ ಮುಂಜಾನೆ 2.50 ಅಡಿಗಳಷ್ಟು ಜಗ್ಗಿದ ಪರಿಣಾಮ ಸೇತುವೆ ಬಿರುಕು ಬಿಟ್ಟಿತ್ತು. ಒಂದು ತಿಂಗಳಿನಿಂದ ಇಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣ ನಡೆಯುತ್ತಿದ್ದು, ಆ ಕಾಮಗಾರಿಯಿಂದಾಗಿ ಮಳೆ ನೀರು ಸೇತುವೆಯ ಪಿಲ್ಲರ್ ಇರುವಲ್ಲಿ ಒಂದೇ ಭಾಗದಲ್ಲಿ ಹರಿಯುವಂತೆ ಆದದ್ದು ಪಿಲ್ಲರ್ ಜಗ್ಗಲು ಕಾರಣ ಎಂದು ಸ್ಥಳೀಯರು ಹೇಳಿದ್ದರು.