janadhvani

Kannada Online News Paper

ಕೇಂದ್ರ ಸಂಪುಟ: 33 ಮಂತ್ರಿಗಳು ಕ್ರಿಮಿನಲ್ಗಳು, ಶೇ.90 ಕೋಟ್ಯಾಧಿಪತಿಗಳು

ನವ ದೆಹಲಿ; ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಯ ಸರ್ಕಾರ ರಚನೆ ಮಾಡಿ ಎರಡು ವರ್ಷವೇ ಕಳೆದಿದೆ. ಆದರೆ, ಕಳೆದ ಎರಡು ವರ್ಷದಿಂದ ಕ್ಯಾಬಿನೆಟ್ ಪುನರ್ರಚನೆ ಮಾಡಿರಲಿಲ್ಲ. ಆದರೆ, ಉತ್ತರಪ್ರದೇಶ ಚುನಾವಣೆ ಹತ್ತರವಾಗುತ್ತಿ ದ್ದಂತೆ ಬಿಜೆಪಿ ಹೈಕಮಾಂಡ್ ಸಚಿವ ಸಂಪುಟದ ಪುನರ್ರಚನೆಗೆ ಮುಂದಾಗಿತ್ತು. ಅಲ್ಲದೆ, 44 ಹೊಸ ಮುಖಗಳನ್ನು ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಹೊಸ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

ಆದರೆ, ಪ್ರಧಾನಿ ನರೇಂದ್ರ ಮೋದಿಯ ನೂತನ ಕೇಂದ್ರ ಸಂಪುಟದ ಶೇಕಡಾ 40 ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಶೇಕಡಾ 90 ರಷ್ಟು ಸಚಿವರು ಕೋಟ್ಯಾಧಿಪತಿಗಳಿದ್ದಾರೆ ಎಂದು ಇಂಡಿಪೆಂಡೆಂಟ್ ವಾಚ್‌ಡಾಗ್ ಗ್ರೂಪ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ತನ್ನ ವರದಿಯಲ್ಲಿ ತಿಳಿಸಿದೆ.

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವನ್ನು ಪುನರ್ರಚಿಸಲಾಯಿತು. ಈ ವೇಳೆ 44 ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಪುಟದಲ್ಲಿನ 78 ಮಂತ್ರಿಗಳಲ್ಲಿ 33 (42%) ಮಂದಿ ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿದ್ದಾರೆ ಎಂದು ಎಡಿಆರ್ ತಿಳಿಸಿದೆ.

ಅದರಲ್ಲಿ, 24 ಮಂತ್ರಿಗಳ (ಶೇ.31) ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ದರೋಡೆ ಸೇರಿದಂತೆ ಗಂಭೀರ ಪ್ರಕರಣಗಳು ಇರುವುದನ್ನು ಸ್ವತಃ ತಾವೇ ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟವನ್ನು ಪುನರ್ರಚಿಸಿದ ಬಳಿಕ ಸಂಪುಟದಲ್ಲಿ ಕ್ರಿಮಿನಲ್ ಪ್ರಕರಣಗಳಿರುವ ಸಚಿವರ ಪ್ರಮಾಣ ಶೇಕಡಾ 3 ರಷ್ಟು ಏರಿಕೆಯಾಗಿದೆ. 2019 ರಲ್ಲಿ ಎಡಿಆರ್ ನಡೆಸಿದ ವಿಶ್ಲೇಷಣೆಯಲ್ಲಿ, ಮೊದಲ ಸಚಿವ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದ, 56 ಮಂತ್ರಿಗಳಲ್ಲಿ ಶೇಕಡಾ 39 ರಷ್ಟು ಮಂದಿಯ ವಿರುದ್ದ ಕ್ರಿಮಿನಲ್ ಪ್ರಕರಣಗಳಿದ್ದವು. ಆ ಸಂಪುಟದಲ್ಲಿಯೂ ಶೇಕಡಾ 91 ರಷ್ಟು ಮಂದಿ ಕೋಟ್ಯಾಧಿಪತಿಗಳಿದ್ದರು ಎಂದು ಎಡಿಆರ್ ತಿಳಿಸಿದೆ.

ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ನೇಮಕಗೊಂಡಿರುವ ಕೂಚ್ ಬೆಹರ್ ಕ್ಷೇತ್ರದ ನಿಸಿತ್ ಪ್ರಮಾಣಿಕ್, ತಮ್ಮ ವಿರುದ್ಧ ಕೊಲೆ (ಐಪಿಸಿ ಸೆಕ್ಷನ್ -302) ಪ್ರಕರಣ ಇರುವುದನ್ನು ಘೋಷಿಸಿಕೊಂಡಿದ್ದಾರೆ. ಹೊಸ ಸಚಿವ ಸಂಪುಟದಲ್ಲಿ 35 ನೇ ವಯಸ್ಸಿನಲ್ಲಿ ಸಚಿವರಾಗಿ ಅತ್ಯಂತ ಕಿರಿಯ ಸಚಿವ ಎನಿಸಿಕೊಂಡಿದ್ದಾರೆ.

ಹೊಸ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಜಾನ್ ಬಾರ್ಲಾ, ಪ್ರಮಾಣಿಕ್, ಪಂಕಜ್ ಚೌಧರಿ ಮತ್ತು ವಿ.ಮುರಳೀಧರನ್ ಈ ನಾಲ್ಕು ಸಚಿವರು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳು ಇರುವುದನ್ನು ಘೋಷಿಸಿಕೊಂಡಿದ್ದಾರೆ (ಐಪಿಸಿ ಸೆಕ್ಷನ್ -307).

ನರೇಂದ್ರ ಮೋದಿ ಸಂಪುಟದ 70 (90%) ಸಚಿವರು ಕೋಟ್ಯಾಧಿಪತಿಗಳಾಗಿದ್ದು, ಪ್ರತಿ ಸಚಿವರ ಸರಾಸರಿ ಆಸ್ತಿ 16.24 ಕೋಟಿ ರೂ. ನಾಲ್ವರು ಸಚಿವರು 50 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ. ಅವರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ – 395 ಕೋಟಿ ರೂಪಾಯಿ, ಪಿಯೂಷ್ ಗೋಯಲ್ – 95 ಕೋಟಿ ರೂಪಾಯಿ, ನಾರಾಯಣ್ ರಾಣೆ – 87 ಕೋಟಿ ರೂಪಾಯಿ ಮತ್ತು ರಾಜೀವ್ ಚಂದ್ರಶೇಖರ್ – 64 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

ಹೊಸ ಕ್ಯಾಬಿನೆಟ್‌ ಮಂತ್ರಿಗಳಲ್ಲಿ 21 ಜನ ಸ್ನಾತಕೋತ್ತರ ಪದವೀಧರರಾಗಿದ್ದಾರೆ. 9 ಮಂತ್ರಿಗಳು ಡಾಕ್ಟರೇಟ್ ಪಡೆದಿದ್ದರೇ, ತಲಾ 17 ಮಂದಿ ಪದವೀಧರರು ಮತ್ತು ವೃತ್ತಿಪರ ಪದವೀಧರರಾಗಿದ್ದಾರೆ. ಇನ್ನು 7 ಮಂದಿ ತಮ್ಮ ಹನ್ನೆರಡನೇ ತರಗತಿ, 3 ಸಚಿವರು ತಮ್ಮ ಹತ್ತನೇ ತರಗತಿ ಮತ್ತು ಇಬ್ಬರು ಸಚಿವರು ತಮ್ಮ ಎಂಟನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com