ಬೆಂಗಳೂರು: ರಾಜ್ಯದಲ್ಲಿ ಅನ್‌ಲಾಕ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ, ಅನುದಾನಿತ ಪದವಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳ ಶೇ.100 ಬೋಧಕ-ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣ ಕಡಿಮೆಯಾಗುತ್ತಿದ್ದು, ಸರ್ಕಾರವೂ ಈಗಾಗಲೆ, ಅನ್‌ಲಾಕ್ 3.0 ಘೋಷಣೆ ಮಾಡಿದೆ. ಸರ್ಕಾರದ ಎಲ್ಲ ಸಿಬ್ಬಂದಿ ಶೇ.100 ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಕರೊನಾ ನಿಯಮ ಪಾಲಿಸಿಕೊಂಡು, ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಲು ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಈ ಮೊದಲು ಎರಡನೇ ಅಲೆಯ ಹಿನ್ನೆಲೆಯಲ್ಲಿ ಉಪನ್ಯಾಸಕರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು. ಬಹುತೇಕ ಉಪನ್ಯಾಸಕರು ಕಲಿಕಾ ನಿರ್ವಹಣಾ ವ್ಯವಸ್ಥೆ(ಎಲ್‌ಎಂಎಸ್)ಗೆ ಕಲಿಕಾ ಸಾಮಗ್ರಿಯ ಸಿದ್ಧತೆ, ಆನ್‌ಲೈನ್ ಪಾಠ ಸೇರಿದಂತೆ ಕಾಲೇಜಿನ ಬಹುತೇಕ ಕಾರ್ಯವನ್ನು ಮನೆಯಿಂದಲೇ ಮಾಡುತ್ತಿದ್ದರು. ಕೆಲವೇ ಕೆಲವು ಉಪನ್ಯಾಸಕರು ಮಾತ್ರ ಪ್ರಾಂಶುಪಾಲರ ಸೂಚನೆಯಂತೆ ಕಾಲೇಜಿಗೆ ಬರುತ್ತಿದ್ದರು. ಈಗ ರಾಜ್ಯಾದ್ಯಂತ ಅನ್‌ಲಾಕ್ ಘೋಷಣೆಯಾಗಿರುವುದರಿಂದ ಎಲ್ಲರೂ ಕಾಲೇಜಿಗೆ ಬರಲು ಸೂಚನೆ ನೀಡಲಾಗಿದೆ.