janadhvani

Kannada Online News Paper

ಕೇಂದ್ರದಿಂದ ಮುಂದುವರಿದ ಬೆಲೆಯೇರಿಕೆ ಶಾಕ್: ಇಂದಿನಿಂದ ಎಲ್ಪಿಜಿ ಗ್ಯಾಸ್ ಬೆಲೆ ಹೆಚ್ಚಳ

ನವದೆಹಲಿ, ಜು.01: ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಜನಸಾಮಾನ್ಯರಿಗೆ ಶಾಕ್ ಕೊಡುತ್ತಲೇ ಇದೆ. ಈಗಾಗಲೇ ಪೆಟ್ರೋಲ್-ಡೀಸೆಲ್ ಬೆಲೆ ಈಗಾಗಲೇ 100 ರೂ.ದಾಟಿದ್ದು, ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ದಿನಬಳಕೆಯ ವಸ್ತುಗಳು ಸಹ ದುಬಾರಿಯಾಗುತ್ತಿವೆ. ಇಂದಿನಿಂದ ದೇಶಾದ್ಯಂತ 1 ಲೀಟರ್ ಅಮುಲ್ ಹಾಲಿಗೆ 2 ರೂಪಾಯಿ ಏರಿಸಲಾಗಿದೆ. ಹೀಗೆ ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಒಂದಾದ ನಂತರ ಒಂದು ಬರೆ ಎಳೆಯುತ್ತಲೇ ಇದೆ. ಇಂದು ದಿನನಿತ್ಯ ಬಳಸುವ ಅಗತ್ಯ ವಸ್ತುಗಳಲ್ಲಿ ಒಂದಾದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸುವ ಮೂಲಕ ಸರ್ಕಾರ ಜನರಿಗೆ ಶಾಕ್ ನೀಡಿದೆ.

ತೈಲ ಮಾರುಕಟ್ಟೆ ಕಂಪನಿಗಳು 14.2 ಕೆ.ಜಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ 25.50 ರೂ. ಏರಿಕೆ ಮಾಡಿವೆ. ಇದರೊಂದಿಗೆ ನವದೆಹಲಿಯಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 834.50 ರೂ ಆಗಿದೆ. ನೂತರ ಪರಿಷ್ಕೃತ ದರ ಜುಲೈ 1ರಿಂದ ಅನ್ವಯಯವಾಗಲಿದೆ.

ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿರುವ ಸರ್ಕಾರದ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 834.50 ರೂ. ಇದ್ದರೆ, ಕೊಲ್ಕತ್ತಾದಲ್ಲಿ 835.50 ರೂ. ಇದೆ. ಅದೇ ರೀತಿ ಚೆನ್ನೈನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ತುಂಬಾ ದುಬಾರಿಯಾಗಿದ್ದು, 850.50 ರೂ.ಗೆ ಏರಿಕೆಯಾಗಿದೆ.

ಇನ್ನು, ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನೂ ತೈಲ ಮಾರುಕಟ್ಟೆ ಕಂಪನಿಗಳು ಜಾಸ್ತಿ ಮಾಡಿವೆ. ಪ್ರತಿ ಸಿಲಿಂಡರ್ಗೆ 84 ರೂ. ಏರಿಸಿವೆ.

ಕಳೆದ 6 ತಿಂಗಳಲ್ಲಿ 14.2 ಕೆಜಿಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ 140 ರೂ.ಏರಿಕೆಯಾಗಿದೆ. ಈ ವರ್ಷ ಮೊದಲ ಬಾರಿಗೆ ಫೆಬ್ರವರಿ 4ರಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ 25 ರೂಪಾಯಿ ಏರಿಸಲಾಗಿತ್ತು. ಬಳಿಕ ಫೆಬ್ರವರಿ 15ರಂದು 50 ರೂಪಾಯಿ ಏರಿಕೆ ಮಾಡಲಾಗಿತ್ತು. ಫೆಬ್ರವರಿ 25 ಮತ್ತು ಮಾರ್ಚ್ 1ರಂದು ಮತ್ತೆ 25 ರೂ. ಹೆಚ್ಚಿಸಲಾಗಿತ್ತು. ಇದರೊಂದಿಗೆ ಫೆಬ್ರವರಿ ತಿಂಗಳೊಂದರಲ್ಲೇ 3 ಬಾರಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಸಲಾಗಿತ್ತು. ಪ್ರತಿ ಗ್ಯಾಸ್ ಸಿಲಿಂಡರ್ಗೆ 125 ರೂಪಾಯಿ ಏರಿಕೆಯಾದ ಬಳಿಕ, ಏಪ್ರಿಲ್ 1ರಂದು ಪ್ರತೀ ಸಿಲಿಂಡರ್ಗೆ 10 ರೂಪಾಯಿ ಕಡಿತ ಮಾಡಲಾಗಿತ್ತು.

ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಅತ್ಯಂತ ದುಬಾರಿಯಾಗಿದ್ದು, ಜನರು ಕೈಸುಟ್ಟುಕೊಳ್ಳುವಂತಾಗಿದೆ. ಇದೇ ವೇಳೆ ಗ್ಯಾಸ್ ಸಿಲಿಂಡರ್ ಬೆಲೆಯೂ ಏರಿಕೆಯಾಗಿರುವುದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಾದಂತೆ ದೇಶದಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಿನಿಂದ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ.

error: Content is protected !! Not allowed copy content from janadhvani.com