janadhvani

Kannada Online News Paper

ನಾಳೆಯಿಂದ ದ.ಕ.ಜಿಲ್ಲೆಯಲ್ಲೂ ಸರ್ಕಾರಿ ಬಸ್ ಓಡಾಟ ಆರಂಭ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟುಗಳ ಚಟುವಟಿಕೆಯು ಈ ಹಿಂದೆ ತಿಳಿಸಿದಂತೆ ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಆದಿತ್ಯವಾರ ಸಂಜೆ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಅಧಿಕೃತ ಆದೇಶವನ್ನು ಹೊರಡಿಸಿ ಜೂ.23ರಿಂದ ಜುಲೈ 5ರವರೆಗೆ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳ ಚಟುವಟಿಕೆಯನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ ಮಾಡಬಹುದಾಗಿದೆ ಎಂದಿದ್ದರು. ಅಲ್ಲದೆ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಾಗಾಗಿ ಸಾರ್ವಜನಿಕರಲ್ಲಿ ಗೊಂದಲವೂ ಸೃಷ್ಟಿಯಾಗಿತ್ತು.

ಆ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ದ.ಕ.ಜಿಲ್ಲಾಧಿಕಾರಿ, ರವಿವಾರ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಜೊತೆ ಸಮಾಲೋಚನೆ ಮಾಡಿ ಬೆಳಗ್ಗೆ 7ರಿಂದ 2ರವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದೆವು. ರಾಜ್ಯ ಸರಕಾರ ಸಮಯದಲ್ಲಿ ಕೊಂಚ ಬದಲಾವಣೆ ಮಾಡಿರುವ ಕಾರಣ ಗೊಂದಲ ಉಂಟಾಗಿದೆ. ಸರಕಾರವು ಸ್ಥಳೀಯವಾಗಿ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಬದಲಾಯಿಸಲು ಅವಕಾಶ ನೀಡಿದ ಮೇರೆಗೆ ದ.ಕ.ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಬಹುದಾಗಿದೆ ಎಂದಿದ್ದಾರೆ.

ಈ ಅವಧಿಯಲ್ಲಿ ಎಸಿ (ಏರ್ ಕಂಡಿಷನ್ಡ್) ಅಂಗಡಿಗಳು ಹಾಗೂ ಎಸಿ ಹೊಂದಿರುವ ಶಾಪ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಮತ್ತು ಮಾಲ್‌ಗಳಿಗೆ ಕಾರ್ಯಾಚರಣೆಗೆ ಅವಕಾಶವಿರುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಜಿಲ್ಲಾದ್ಯಂತ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ವಾರಾಂತ್ಯ ಕರ್ಫ್ಯೂ ಇದೆ. ಈ ದಿನವನ್ನು ಹೊರತುಪಡಿಸಿ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸರಕಾರಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬಹುದಾಗಿದೆ. ನಿಂತು ಪ್ರಯಾಣಿಸಲು ಅವಕಾಶವಿಲ್ಲ ಎಂದಿದ್ದಾರೆ.

ಸೋಮವಾರದಿಂದ ಸೆಮಿ ಅನ್‌ಲಾಕ್ ಮಾಡುತ್ತಲೇ ಜವುಳಿ ವ್ಯಾಪಾರಸ್ಥರು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಜವುಳಿ ವ್ಯಾಪಾರಕ್ಕೂ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದರು. ಆ ಹಿನ್ನಲೆಯಲ್ಲಿ ಮಂಗಳವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ‘ಜೂ.23ರಿಂದ ಎಲ್ಲಾ ಅಂಗಡಿಗಳು ತೆರೆಯಲು ಅವಕಾಶ ಕಲ್ಪಿಸಲಾಗುವುದು’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಅದಕ್ಕೆ ಪೂರಕವಾಗಿ ಮಂಗಳವಾರ ಸಂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ಜನರು ಕೊರೋನ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಈ ಸಂಕಷ್ಟದ ದಿನಗಳಲ್ಲಿ ಜಿಲ್ಲಾಡಳಿತದ ಜತೆ ಸಹಕರಿಸಬೇಕು ಎಂದು ಹೇಳಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯಲ್ಲಿ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಒಂದಷ್ಟು ಸಮಸ್ಯೆಗಳಾಗಿವೆ. ಜವಳಿ, ಝೆರಾಕ್ಸ್ ಹಾಗೂ ಇತರ ಅಂಗಡಿಗಳವರು ತಮಗೆ ಬದುಕು ಕಟ್ಟಿಕೊಳ್ಳಲು ಕಷ್ಟವಾಗಿದೆ ಎಂಬ ದೂರು ಇತ್ತು. ಜಿಲ್ಲೆಯ ಶಾಸಕರು ಕೂಡಾ ಲಾಕ್‌ಡೌನ್ ಇನ್ನಷ್ಟು ಸಡಿಲಗೊಳಿಸಬೇಕೆಂಬ ಆಗ್ರಹ ಹಾಗೂ ಸಂಸದ ನಳಿನ್ ಕುಮಾರ್‌ರ ಸೂಚನೆಯ ಮೇರೆಗೆ ಮುಖ್ಯಮಂತ್ರಿಯನ್ನು ಭೇಟಿಯಾದ ಕಾರಣ ಭಾಗಶಃ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ ಎಂದು ಹೇಳಿದರು.

ನಮ್ಮಲ್ಲಿ ಕೊರೋನ ಸೋಂಕಿತರ ಪಾಸಿಟಿವಿ ದರ ಇನ್ನಷ್ಟು ಕಡಿಮೆಯಾಗಬೇಕೆಂಬ ಸೂಚನೆಯನ್ನು ಮುಖ್ಯಮಂತ್ರಿ ನೀಡಿದ್ದು, ಸ್ವೇಚ್ಛಾಚಾರದ ತಿರುಗಾಟವನ್ನು ಎಲ್ಲರೂ ನಿಲ್ಲಿಸಬೇಕು ಹಾಗೂ ಎಲ್ಲರೂ ಲಸಿಕೆಯನ್ನು ಪಡೆಯಬೇಕು. ಕೊರೋನ ನಿಯಮಗಳನ್ನು ಪಾಲಿಸಿಕೊಂಡು ಜನಜಂಗುಳಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಕೋಟ ಮನವಿ ಮಾಡಿದ್ದಾರೆ.

error: Content is protected !! Not allowed copy content from janadhvani.com