janadhvani

Kannada Online News Paper

ಇ-ಕಾಮರ್ಸ್ಗಳ ಫ್ಲ್ಯಾಶ್‌ ಸೇಲ್‌ನಂತಹ ವಿಶೇಷ ವ್ಯಾಪಾರ ಚಟುವಟಿಕೆಗಳಿಗೆ ನಿರ್ಬಂಧ

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ ಹಾಕುವ ನೂತನ ಐಟಿ ನೀತಿಗಳ ಬೆನ್ನಲ್ಲೇ ಕೇಂದ್ರ ಸರಕಾರ, ಇ-ಕಾಮರ್ಸ್ ವ್ಯವಹಾರದಲ್ಲಿ ನಡೆಯುತ್ತಿರುವ ವಂಚನೆ ಹಾಗೂ ನ್ಯಾಯೋಚಿತವಲ್ಲದ ವ್ಯಾಪಾರಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ದೇಶದ ಇ-ಕಾಮರ್ಸ್ ನಿಯಮಗಳಲ್ಲಿ ಹಲವು ಬದಲಾವಣೆಗಳಿಗೆ ಸೋಮವಾರ ಪ್ರಸ್ತಾಪ ಇರಿಸಲಾಗಿದೆ. ಈ ಬದಲಾವಣೆಗಳು ಇ-ಕಾಮರ್ಸ್ ಸಂಸ್ಥೆಗಳು ನಡೆಸುವ ಫ್ಲ್ಯಾಶ್‌ ಸೇಲ್‌ನಂತಹ ವಿಶೇಷ ವ್ಯಾಪಾರ ಚಟುವಟಿಕೆಗಳನ್ನು ನಿರ್ಬಂಧಿಸುವ ಹಾಗೂ ಮಾರಾಟಗಾರರು ಪೂರೈಕೆ ಮಾಡದೆ ಹೋದರೆ ಕಠಿಣ ಕ್ರಮ ತೆಗೆದುಕೊಳ್ಳುವಂತಹ ನಿಯಮಗಳನ್ನೂ ಒಳಗೊಂಡಿವೆ.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ಗ್ರಾಹಕ ರಕ್ಷಣೆ (ಇ-ಕಾಮರ್ಸ್) 2020 ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಇದರ ಕರಡು ನಿಯಮಗಳನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಪಾರದರ್ಶಕತೆ ತರುವುದು, ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು, ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಸ್ಪರ್ಧೆಗೆ ಉತ್ತೇಜನ ನೀಡುವುದು ಈ ನಿಯಮ ತಿದ್ದುಪಡಿಗಳ ಉದ್ದೇಶ ಎಂದು ಸಚಿವಾಲಯ ತಿಳಿಸಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಆನ್‌ಲೈನ್ ಮಾರಾಟ ಮಾಡುವ ಇ-ಕಾಮರ್ಸ್ ಕಂಪೆನಿಗಳು ಕೈಗಾರಿಕೆಗಳು ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಲ್ಲಿ (ಡಿಪಿಐಐಟಿ) ನೋಂದಣಿ ಮಾಡಿಸಿಕೊಳ್ಳಬೇಕು. ಅವು ಸೈಬರ್ ಭದ್ರತೆಯ ಘಟನೆಗಳು ಅಥವಾ ಯಾವುದೇ ಕಾನೂನಿನ ಪ್ರಕಾರ ಉಂಟಾಗಬಹುದಾದ ಅಪರಾಧಗಳ ತಡೆ, ಪತ್ತೆ, ತನಿಖೆ ಅಥವಾ ಶಿಕ್ಷೆಗಾಗಿ ಅಥವಾ ಗುರುತುಗಳ ಪರಿಶೀಲನೆಗಾಗಿ ದೇಶದ ಕಾನೂನಾತ್ಮಕ ಅಧಿಕಾರವುಳ್ಳ ಸಂಸ್ಥೆಗಳ ಜತೆ ಅಗತ್ಯ ಸಮಯಗಳಲ್ಲಿ ಮಾಹಿತಿ ಹಂಚಿಕೊಳ್ಳಬೇಕಿದೆ.

ಫ್ಲ್ಯಾಶ್ ಸೇಲ್ ಮಾರಾಟಕ್ಕೆ ನಿರ್ಬಂಧ?

ಸರಕಾರದ ಸಂಸ್ಥೆಯು ಕೇಳುವ ಮಾಹಿತಿಯನ್ನು ಇ-ಕಾಮರ್ಸ್ ಕಂಪೆನಿಯು ಆದೇಶ ಸ್ವೀಕರಿಸಿದ 72 ಗಂಟೆಗಳ ಒಳಗೆ ಅಗತ್ಯ ಮಾಹಿತಿಗಳನ್ನು ಒದಗಿಸಬೇಕಿದೆ. ಕೆಲವು ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರ ಆಯ್ಕೆಗಳನ್ನು ಸೀಮಿತಗೊಳಿಸುವುದರಲ್ಲಿ ತೊಡಗಿವೆ. ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುತ್ತಿರುವ ಮಾರಾಟಗಾರ ಯಾವುದೇ ದಾಸ್ತಾನು ಅಥವಾ ಆರ್ಡರ್ ಪೂರೈಕೆ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆದರೂ ‘ಫ್ಲ್ಯಾಶ್ ಅಥವಾ ಬ್ಯಾಕ್ ಟು ಬ್ಯಾಕ್ ಆರ್ಡರ್’ ಸೌಲಭ್ಯಗಳನ್ನು ಆ ಪ್ಲಾಟ್‌ಫಾರ್ಮ್ ನಿಯಂತ್ರಿಸುವ ಬೇರೊಬ್ಬ ಮಾರಾಟಗಾರರಲ್ಲಿ ಇರಿಸುತ್ತಾರೆ ಎಂದಿರುವ ಸಚಿವಾಲಯ, ವಿವಿಧ ಇ-ಕಾಮರ್ಸ್ ಸಂಸ್ಥೆಗಳು ನಡೆಸುವ ಫ್ಲ್ಯಾಶ್ ಸೇಲ್‌ಗಳಿಗೆ ನಿಷೇಧ ಹೇರುವ ಪ್ರಸ್ತಾಪ ಇರಿಸಿದೆ.

ಇದು ನ್ಯಾಯೋಚಿತ ಸ್ಪರ್ಧೆಯನ್ನು ತಡೆಯುತ್ತಿದೆ ಮತ್ತು ಅಂತಿಮವಾಗಿ ಗ್ರಾಹಕರ ಆಯ್ಕೆಗಳನ್ನು ಸೀಮಿತಗೊಳಿಸುತ್ತದೆ ಹಾಗೂ ಬೆಲೆಯನ್ನು ಹೆಚ್ಚಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಕಾನೂನು ಜಾರಿ ಸಂಸ್ಥೆಗಳ ಜತೆ ದಿನದ 24 ಗಂಟೆಯೂ ಸಮನ್ವಯ ಸಾಧಿಸುವ ಮುಖ್ಯ ಅಹವಾಲು ಅಧಿಕಾರಿಗಳು, ನೋಡಲ್ ಸಂಪರ್ಕ ವ್ಯಕ್ತಿಗಳನ್ನು ನೇಮಿಸುವಂತೆ ಶಿಫಾರಸು ಮಾಡಲಾಗಿದೆ.

error: Content is protected !! Not allowed copy content from janadhvani.com