ಬೆಂಗಳೂರು:ಮಹಮ್ಮದೀಯ ಕಾನೂನು ಎರಡನೇ ಮದುವೆಯನ್ನು ಸಮ್ಮತಿಸಿದರೂ ಪೋಕ್ಸೊ ಕಾಯಿದೆಯನ್ನಾಗಲಿ, ಬಾಲ್ಯ ವಿವಾಹ ನಿರ್ಬಂಧ ಕಾಯಿದೆಯನ್ನಾಗಲೀ, ಭಾರತೀಯ ದಂಡ ಸಂಹಿತೆಯನ್ನಾಗಲೀ ನಿರ್ಬಂಧಿಸುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಾಲಕಿಯನ್ನು ಅಪಹರಿಸಿದ ಹಾಗೂ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ತಿಪಟೂರಿನ ರಾಹುಲ್ ಅಲಿಯಾಸ್ ನಯಾಜ್ ಪಾಷಾ ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ.
ಬಾಲಕಿಯನ್ನು ಆರೋಪಿ ಅಪಹರಿಸಿ, ಮೂರು ದಿನಗಳ ಕಾಲ ಬಂಧನದಲ್ಲಿಟ್ಟು ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ತಾಯಿ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಮಹಮ್ಮದೀಯ ಕಾನೂನು ಪ್ರಕಾರ ತಾನು ಬಾಲಕಿಯನ್ನು ಮುತವಲ್ಲಿ ಎದುರು ಎರಡನೇ ಮದುವೆಯಾಗಿರುವುದಾಗಿ ಆರೋಪಿ ಹೇಳಿದ್ದಾನೆ. ಹಾಗೆಯೇ, ಬಾಲಕಿ ತನ್ನನ್ನು ಇಷ್ಟಪಟ್ಟೇ ಮದುವೆಯಾಗಿದ್ದಾಳೆ, ಬಲವಂತವಾಗಿ ದೈಹಿಕ ಸಂಪರ್ಕ ನಡೆದಿದೆ ಎಂದು ಬಾಲಕಿ ಎಲ್ಲಿಯೂ ಹೇಳಿಲ್ಲ ಎಂದು ವಾದಿಸಿದ್ದಾನೆ.
ಆದರೆ ಮಹಮ್ಮದೀಯ ಕಾನೂನು ಎರಡನೇ ಮದುವೆಗೆ ಸಮ್ಮತಿಸಿದರೂ, ಬಾಲ್ಯ ವಿವಾಹ ಕಾಯಿದೆ, ಪೋಕ್ಸೊ ಹಾಗೂ ಐಪಿಸಿಗಳನ್ನು ನಿರ್ಬಂಧಿಸುವುದಿಲ್ಲ. ಆರೋಪಿಯು ದಾಖಲೆಗಳನ್ನು ತಿದ್ದಿ ವಿವಾಹ ನೋಂದಣಿ ಪ್ರಮಾಣಪತ್ರ ಪಡೆದಿದ್ದಾನೆ.
ದಾಖಲೆಗಳ ಪ್ರಕಾರ ಬಾಲಕಿಗೆ ಇನ್ನೂ 15 ವರ್ಷ. ಹೀಗಾಗಿ ಬಾಲಕಿ ಸಮ್ಮತಿಸಿದರೂ ಆಕೆಯನ್ನು ಕರೆದೊಯ್ದು ಮದುವೆಯಾಗುವುದು, ದೈಹಿಕ ಸಂಪರ್ಕ ನಡೆಸುವುದು ಶಿಕ್ಷಾರ್ಹ ಅಪರಾಧ ಎನಿಸಿಕೊಳ್ಳುತ್ತವೆ. ಆಕೆ ವಿರೋಧಿಸಿಲ್ಲ ಎಂಬ ಕಾರಣಕ್ಕೂ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟು, ಆರೋಪಿಯ ಜಾಮೀನು ಅರ್ಜಿ ವಜಾ ಮಾಡಿದೆ.