ಕೊಚ್ಚಿ :ಲಕ್ಷದ್ವೀಪದ ಮೇಲೆ ಕೇಂದ್ರ ಸರ್ಕಾರ ಜೈವಿಕ ಬಾಂಬ್ ಪ್ರಯೋಗಿಸಿದೆ ಎಂಬ ಪದಪ್ರಯೋಗ ಮೂಲಕ ದೇಶದ್ರೋಹ ಪ್ರಕರಣಕ್ಕೆ ಒಳಗಾಗಿ ನಂತರ ಕೇರಳ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದಿದ್ದ ಚಿತ್ರ ನಿರ್ಮಾಪಕಿ ಆಯೆಷಾ ಸುಲ್ತಾನಾ ಇದೀಗ ಲಕ್ಷದ್ವೀಪಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಆಯಿಷಾ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ ಯಾವುದೇ ಕೇಸ್‌ಗಳಿಗೂ ಹೆದರುವುದಿಲ್ಲ. ಲಕ್ಷದ್ವೀಪಕ್ಕೆ ನ್ಯಾಯ ಸಿಗುವವರೆಗೆ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಕೊಚ್ಚಿ ವಿಮಾನ ನಿಲ್ಧಾಣದಲ್ಲಿ ಆಯಿಷಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾನುವಾರ ಕವರತ್ತಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲು ಆಯಿಷಾ ಲಕ್ಷದ್ವೀಪಕ್ಕೆ ತೆರಳಿದ್ದಾರೆ. ಅಲ್ಲದೆ, ತಮ್ಮ ಜೊತೆ ವಕೀಲರನ್ನು ಸಹ ಕರೆದುಕೊಂಡು ಹೋಗುವುದಾಗಿ ಆಯಿಷಾ ತಿಳಿಸಿದ್ದಾರೆ.
ನ್ಯಾಯ ಸಿಗುವ ಭರವಸೆಯಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿದೆ ಎಂದು ಆಯಿಷಾ ಸುಲ್ತಾನಾ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. “ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಒಂದು ಪದದಿಂದ ಇಷ್ಟೆಲ್ಲಾ ರಾದ್ಧಾಂತ ಸಂಭವಿಸಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಾಬೀತು ಪಡಿಸುವ ಜವಾಬ್ಧಾರಿಯಿದೆ. ನಾನು ಸಾಬೀತು ಪಡಿಸುತ್ತೇನೆ” ಎಂದು ಆಯಿಷಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಲಯಾಳಂ ಟಿವಿ ಡಿಬೇಟ್ ಒಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಆಯಿಷಾ ಲಕ್ಷದ್ವೀಪ ಲೆಫ್ಟೆನೆಂಟ್ ಗವರ್ನರ್ ವಿರುದ್ಧ ಆಕ್ಷೇಪಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಲಕ್ಷದ್ವೀಪದ ಕವರತ್ತಿ ಪೊಲೀಸರು ಆಯಿಷಾ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಹಾಗೇ ಜೂನ್ 20 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಿದ್ದರು. ಆಯಿಷಾ ಆ ಕಾರಣದಿಂದ ವಿಚಾರಣೆ ಎದುರಿಸಲು ಲಕ್ಷದ್ವೀಪಕ್ಕೆ ತೆರಳಿದ್ದಾರೆ.