ಮಲಪ್ಪುರಂ,ಜೂ.18:ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿ ಮಾಡಲು ತೆರಳುತ್ತಿದ್ದ ವೇಳೆ, ಯುಎಪಿಎ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿರುವ ಕೇರಳ ಮೂಲದ ಪತ್ರಕರ್ತ ಸಿದ್ದೀಖ್ ಕಾಪ್ಪನ್ ಅವರ ತಾಯಿ ಇಂದು ಮೃತರಾಗಿದ್ದಾರೆ. ಅವರು ದೀರ್ಘಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಸಿದ್ದೀಖ್ ಕಾಪ್ಪನ್ ಅವರ ತಾಯಿ 90 ವರ್ಷದ ಖದೀಜಾ ಕುಟ್ಟಿ ಕೇರಳದ ಮಲ್ಲಪುರಂ ಜಿಲ್ಲೆಯ ಗ್ರಾಮವೊಂದರಲ್ಲಿ ಅವರ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಫೆಭ್ರವರಿಯಲ್ಲಿ ಸಿದ್ದೀಖ್ ಕಾಪ್ಪನ್ ಅವರಿಗೆ ತಮ್ಮ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು 5 ದಿನಗಳ ಪೆರೋಲ್ ನೀಡಲಾಗಿತ್ತು.
ಕೇರಳ ಮೂಲದ ಪತ್ರಕರ್ತ ಸಿದ್ದೀಖ್ ಕಾಪ್ಪನ್ 2020 ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ಬಂಧನಕ್ಕೆ ಒಳಗಾಗಿದ್ದರು.ಅವರನ್ನು ಪಿಎಫ್‌ಐ ಜೊತೆಗೆ ಸಂಪರ್ಕವಿದೆ ಎಂದು ಶಂಕಿಸಿ ಬಂಧಿಸಲಾಗಿತ್ತು. ಅವರೊಡನೆ ಇಬ್ಬರನ್ನು ಸೆರೆಮನೆಯಲ್ಲಿಡಲಾಗಿದೆ.
ಅವರ ವಿರುದ್ಧ ದಾಖಲಾದ, ‘ಶಾಂತಿ ಕದಡುವ ಭೀತಿ’ಯ ಆರೋಪದ ವಿಚಾರಣೆಯನ್ನು ಉತ್ತರ ಪ್ರದೇಶದ ಮಥುರಾದ ನ್ಯಾಯಾಲಯವು ಮಂಗಳವಾರ ಕೈಬಿಟ್ಟಿದೆ. ನಿಗದಿತ ಆರು ತಿಂಗಳೊಳಗೆ ಅವರ ವಿರುದ್ಧದ ವಿಚಾರಣೆಯನ್ನು ಪೂರ್ಣಗೊಳಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಪ್ರತಿವಾದಿ ವಕೀಲರು ತಿಳಿಸಿದ್ದಾರೆ.