ಬೆಂಗಳೂರು: 2020 ರ ಕೊರೊನಾ ಸಾಂಕ್ರಮಿಕ ಸಮಯದಲ್ಲಿ ತಬ್ಲೀಘಿ ಜಮಾತ್ ಅನ್ನು ಗುರಿಯಾಗಿಸಿ ಕೊಂಡಿದ್ದಕ್ಕೆ ಕನ್ನಡ ಚಾನೆಲ್‌ಗಳಾದ ‘ನ್ಯೂಸ್ 18 ಕನ್ನಡ’ ಮತ್ತು ‘ಸುವರ್ಣ ನ್ಯೂಸ್’ಗೆ, ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBSA) ಯು ಕ್ರಮವಾಗಿ 1 ಲಕ್ಷ ಮತ್ತು 50 ಸಾವಿರ ದಂಡವನ್ನು ವಿಧಿಸಿದೆ. ಜೊತೆಗೆ ಇದೇ ವಿಷಯಕ್ಕೆ ಇಂಗ್ಲಿಷ್ ನ್ಯೂಸ್ ಚಾನೆಲ್ ಟೈಮ್ಸ್ ನೌ ಅನ್ನು NBSA ಖಂಡಿಸಿದೆ.
NBSA ಗೆ ಬೆಂಗಳೂರು ಮೂಲದ ಕ್ಯಾಂಪೇನ್ ಎಗೇನ್ಸ್ಟ್ ಹೇಟ್ ಸ್ಪೀಚ್ (CAHS) ದೂರುಗಳನ್ನು ಸಲ್ಲಿಸಿತ್ತು. ಏಪ್ರಿಲ್ 1, 2020 ರಂದು ತಬ್ಲಿಘಿ ಜಮಾಅತ್ ಬಗ್ಗೆ ನ್ಯೂಸ್ 18 ಕನ್ನಡ ಪ್ರಸಾರ ಮಾಡಿದ ಎರಡು ಕಾರ್ಯಕ್ರಮಗಳಿಗೆ CAHS ಆಕ್ಷೇಪ ವ್ಯಕ್ತಪಡಿಸಿತ್ತು.
NBSA ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು ನೀಡಿದ ಆದೇಶದಲ್ಲಿ, “… ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ರೀತಿ ಹೆಚ್ಚು ಆಕ್ಷೇಪಾರ್ಹವಾಗಿತ್ತು. ಸುದ್ದಿ ವರದಿಯು ಶುದ್ಧ ಊಹಾಪೋಹವನ್ನು ಆಧರಿಸಿತ್ತು. ಕಾರ್ಯಕ್ರಮದ ಧ್ವನಿ, ವಸ್ತು, ಭಾಷೆ ಒರಟಾಗಿದ್ದು, ಪೂರ್ವಾಗ್ರಹ ಮತ್ತು ಅಗೌರವದಿಂದ ಕೂಡಿತ್ತು … ” ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕೆ ನ್ಯೂಸ್ 18 ಕನ್ನಡಕ್ಕೆ NBSA 1 ಲಕ್ಷ ದಂಡ ವಿಧಿಸಿದೆ. ಅಲ್ಲದೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜೂನ್ 23 ರಂದು ರಾತ್ರಿ 9 ಗಂಟೆಯ ಸುದ್ದಿಗೆ ಮುಂಚಿತವಾಗಿ ಕ್ಷಮೆಯಾಚಿಸುವುದನ್ನು ಪ್ರಸಾರ ಮಾಡಬೇಕು ಚಾನೆಲ್‌ಗೆ ನಿರ್ದೇಶನ ನೀಡಿದೆ. ಜೊತೆಗೆ ಎಲ್ಲಾ ವೆಬ್ ಪೋರ್ಟಲ್‌ಗಳಿಂದ ಎರಡು ಕಾರ್ಯಕ್ರಮಗಳ ವೀಡಿಯೊಗಳನ್ನು ತೆಗೆಯುವಂತೆ ಪ್ರಾಧಿಕಾರವು ಪ್ರಸಾರಕರನ್ನು ಕೇಳಿದೆ.
ಮೇ 31 ಮತ್ತು ಏಪ್ರಿಲ್ 4, 2020 ರ ನಡುವೆ ಸುವರ್ಣ ನ್ಯೂಸ್ ಪ್ರಸಾರ ಮಾಡಿದ ಏಳು ಕಾರ್ಯಕ್ರಮಗಳ ವಿರುದ್ಧದ ದೂರಿನ ಮೇರೆಗೆ, NBSA ತನ್ನ ಆದೇಶದಲ್ಲಿ, “ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ಹರಡುವಿಕೆಯ ಸಂಪೂರ್ಣ ಆಪಾದನೆಯನ್ನು ತಬ್ಲಿಘಿ ಜಮಾಅತ್ ಮೇಲೆ ಹಾಕಲಾಗಿದ್ದು, ಅದನ್ನು ನಿರ್ದಿಷ್ಟ ಸಮುದಾಯದ ವಿರುದ್ದ ತಿರುಗಿಸಲಾಗಿದೆ. ಜೊತೆಗೆ ಕಾರ್ಯಕ್ರಮಗಳ ಶೀರ್ಷಿಕೆಗಳು ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಕಪಟತೆಯನ್ನು ಹೊಂದಿವೆ … ಈ ಕಾರ್ಯಕ್ರಮಗಳಲ್ಲಿ ಖಂಡಿತವಾಗಿಯೂ ಸಮತೋಲನ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆಯ ಕೊರತೆಯಿದೆ. ಅಲ್ಲದೆ ಈ ಕಾರ್ಯಕ್ರಮಗಳು ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಬಹಿರಂಗವಾಗಿ ಪೂರ್ವಾಗ್ರಹ ಪೀಡಿತವಾಗಿದ್ದವು” ಎಂದು ಹೇಳಿದೆ.
ಸುವರ್ಣ ನ್ಯೂಸ್‌ಗೆ 50 ಸಾವಿರ ದಂಡವನ್ನು ವಿಧಿಸಿರುವ NBSA, ಸಮಾಜಿಕ ಜಾಲತಾಣದಲ್ಲಿನ ವಿಡಿಯೊಗಳನ್ನು ಕಿತ್ತು ಹಾಕುವಂತೆ ಕೇಳಿದೆ.
ಏಪ್ರಿಲ್ 2, 2020 ರಂದು ಟೈಮ್ಸ್ ನೌ ಚಾನೆಲ್‌ನಲ್ಲಿ ಪ್ರಸಾರವಾದ, “ತಬ್ಲೀಘಿ ಜಮಾಅತ್ ಉದ್ದೇಶಪೂರ್ವಕವಾಗಿ ಭಾರತವನ್ನು ಹಾಳುಮಾಡುತ್ತಿದೆಯೇ?” ಎಂಬ ಪ್ಯಾನೆಲ್ ಚರ್ಚೆಯ ವಿರುದ್ಧದ ದೂರಿನ ಮೇರೆಗೆ, “ಸಮುದಾಯಗಳ ನಡುವೆ ಕೋಮು ಭಿನ್ನಾಭಿಪ್ರಾಯವನ್ನು ಉಂಟುಮಾಡುವ ಸೂಕ್ಷ್ಮ ವಿಷಯದ ಬಗ್ಗೆ ಇಂತಹ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ” ಎಂದು NBSA ಯು ಚಾನೆಲ್‌ಗೆ ಖಂಡನೆಯನ್ನು ಹೊರಡಿಸಿದೆ.
ನ್ಯಾಯಮೂರ್ತಿ ಎ.ಕೆ. ಸಿಕ್ರಿ ತನ್ನ ಆದೇಶದಲ್ಲಿ, “ಕಾರ್ಯಕ್ರಮದ ನಿರೂಪಕ ತಬ್ಲೀಘಿ ಜಮಾಅತ್‌ಗೆ ಸಂಬಂಧಿಸಿದ ಕೆಲವು ಹೇಳಿಕೆಗಳನ್ನು ನೀಡಿದ್ದಾನೆ, ಅದು ನಿಖರತೆ, ನಿಷ್ಪಕ್ಷಪಾತತೆ, ತಟಸ್ಥತೆ ಮತ್ತು ವಸ್ತುನಿಷ್ಠತೆಯಂತಹ ಮೂಲಭೂತ ತತ್ವಗಳ ಉಲ್ಲಂಘನೆಯಾಗಿದೆ” ಎಂದು ಹೇಳಿದ್ದಾರೆ.