janadhvani

Kannada Online News Paper

ಅನ್‌ಲಾಕ್‌ 2.0: ಮಾಲ್‌, ರೆಸ್ಟೋರೆಂಟ್‌,ಶಾಪಿಂಗ್‌ ಕಾಂಪ್ಲೆಕ್ಸ್‌ ತೆರೆಯಲು ಅನುಮತಿ

ಬೆಂಗಳೂರು: ಸೋಂಕು ಇಳಿಕೆಯಾದ ಹಿನ್ನೆಲೆಯಲ್ಲಿ ಜನರು ಗುಂಪು ಸೇರದಂತೆ ಕೆಲವು ಆರ್ಥಿಕ ಚಟುವಟಿಕೆ ಆರಂಭಿಸಬಹುದು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಸಲಹೆ ನೀಡಿದೆ.

ಮಾಲ್‌, ರೆಸ್ಟೋರೆಂಟ್‌, ಮದುವೆ ಮಂಟಪಗಳು, ಶಾಪಿಂಗ್‌ ಕಾಂಪ್ಲೆಕ್ಸ್‌ಗಳನ್ನು ಜೂ. 21ರಿಂದ ಪುನರಾರಂಭಿಸಬಹುದು ಎಂದು ಸಲಹಾ ಸಮಿತಿ ಹೇಳಿದೆ.

ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಅನ್‌ಲಾಕ್‌ 2ನೇ ಹಂತದಲ್ಲಿ ಶೇ. 50ರಷ್ಟು ಜನರೊಂದಿಗೆ ರೆಸ್ಟೋರೆಂಟ್‌, ಮಾಲ್‌, ಸಲೂನ್‌, ಸ್ಪಾ, ಮದುವೆ ಮಂಟಪಗಳನ್ನು ತೆರೆಯಬಹುದು ಎಂದು ಸೂಚಿಸಿದೆ. ಈ ಪ್ರದೇಶಗಳಲ್ಲಿ ಹೆಚ್ಚೆಚ್ಚು ಜನರು ಸೇರುವುದರಿಂದ ಸೋಂಕು ಹೆಚ್ಚಾಗಿ ಹರಡಲಿದ್ದು, ಅಲ್ಲದೆ, ಲಾಕ್‌ಡೌನ್‌ ತೆರವು 2.0 ಮತ್ತು 3.0 ರ ನಡುವೆ ಎರಡು ವಾರಗಳ ಅಂತರ ಇರುವಂತೆಯೂ ಸೂಚಿಸಿದೆ. ಲಾಕ್‌ಡೌನ್‌ ತೆರವು 3.0ಗೆ ಮೊದಲೂ ಆಕ್ಸಿಜನ್‌ ಹಾಸಿಗೆಗಳು ಶೇ.60ಕ್ಕಿಂತಲೂ ಕಡಿಮೆ ಇರುವ ಜಿಲ್ಲೆಗಳನ್ನು ಪರಿಶೀಲನೆ ನಡೆಸಬೇಕೆಂದು ತಿಳಿಸಿದೆ.

‘ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸದೇ ಹೋದಲ್ಲಿ ಮತ್ತೆ ಹಿಂದಿನ ಪರಿಸ್ಥಿತಿ ಮರುಕಳಿಸಲಿದೆ. ಆಗ ಮಾಲ್‌, ಶಾಪಿಂಗ್‌ ಮಾಲ್‌ ಹಾಗೂ ಮಾರುಕಟ್ಟೆಗಳನ್ನು ತೆರೆಯುವ ಕುರಿತು ಮರುಚಿಂತನೆ ನಡೆಸಬೇಕು. ಬೆಂಗಳೂರಿನಲ್ಲಿ ಸೋಂಕು ಪ್ರಕರಣ ಇಳಿಕೆಯಾಗುತ್ತಿರುವುದು ಕಂಡು ಬರುತ್ತಿದ್ದರೆ ಮಾತ್ರ ಇವುಗಳಿಗೆ ಅವಕಾಶ ನೀಡಬೇಕು’ ಎಂದು ತಾಂತ್ರಿಕ ಸಮಿತಿಯ ಸದಸ್ಯ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಹೇಳಿದ್ದಾರೆ.
ಪ್ರಮುಖ ಸಲಹೆಗಳು.

  • ಜೂನ್‌ ಅಂತ್ಯದವರೆಗೂ ರಾತ್ರಿ ಕರ್ಫ್ಯೂ ಮುಂದುವರಿಸಿ
  • ಸಾರ್ವಜನಿಕ ಸಭೆ, ಧರಣಿ, ಜಾತ್ರೆ ಹಾಗೂ ಹಬ್ಬಗಳ ಮೇಲೆ ನಿರ್ಬಂಧ ಹೇರಿ
  • ಜೂ. 21ರಿಂದ 2ನೇ ಹಂತದ ಲಾಕ್‌ಡೌನ್‌ ತೆರವು ಆರಂಭವಾಗಲಿ
  • ಜು. 5 ರಿಂದ ಮೂರನೇ ಹಂತದ ಲಾಕ್‌ಡೌನ್‌ ತೆರವು ಆರಂಭವಾಗಲಿ
  • ಪರಿಸ್ಥಿತಿ ಅನುಸರಿಸಿ ಜನರ ಓಡಾಟಕ್ಕೆ ಅವಕಾಶ ನೀಡಿ
  • 3ನೇ ಹಂತದ ಲಾಕ್‌ಡೌನ್‌ ತೆರವಿನಲ್ಲಿ ಜಿಮ್‌ (ವ್ಯಾಯಾಮ ಶಾಲೆ), ಯೋಗ, ಧಾರ್ಮಿಕ ಕೇಂದ್ರಗಳು, ಚಿತ್ರಮಂದಿರ, ಕ್ರೀಡಾ ಕ್ಲಬ್‌, ಕ್ಲಬ್‌ ಹೌಸ್‌, ಸಾರ್ವಜನಿಕ ಶೌಚಾಲಯ ಆರಂಭಿಸಿ
  • ನೈಟ್‌ ಕರ್ಫ್ಯೂ, ಶಾಲಾ ಕಾಲೇಜುಗಳ ಪುನರಾರಂಭ ಕುರಿತು ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳಿ.

error: Content is protected !! Not allowed copy content from janadhvani.com