ನವ ದೆಹಲಿ,ಜೂನ್.17: ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊರಿಸಿ ಬಂಧಿಸಲಾದ್ದ ವಿದ್ಯಾರ್ಥಿ ಹೋರಾಟಗಾರರಾದ ನತಾಶಾ ನರ್ವಾಲ್, ದೇವಂಗಾನಾ ಕಾಳಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಕೊನೆಗೂ ಜಾಮೀನು ನೀಡಿ ಆದೇಶಿಸಿದೆ.
ಕೇಂದ್ರ ಸರ್ಕಾರದ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕಳೆದ ವರ್ಷ ದೇಶದಾದ್ಯಂತ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ದೆಹಲಿಯ ಶಾಹೀನ್ ಭಾಗ್ ಪ್ರತಿಭಟನೆ ಎಲ್ಲಾ ಪ್ರತಿಭಟನೆಗಳ ಕೇಂದ್ರವಾಗಿತ್ತು. ಈ ವೇಳೆ ಸಿಎಎ ಪರ ಹೋರಾಟಗಳೂ ಸಹ ಅದೇ ಕಣದಲ್ಲಿ ನಡೆದಿದ್ದವು. ನಂತರ ದಿನಗಳಲ್ಲಿ ಇದು ಕೋಮು ಗಲಭೆಯಾಗಿ ಬದಲಾಗಿ ಇಡೀ ಈಶಾನ್ಯ ದೆಹಲಿ ಹೊತ್ತಿ ಉರಿದದ್ದು ಇಂದು ಇತಿಹಾಸ.
ಆದರೆ, ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಂಜ್ರಾ ತೋಡ್ ಕಾರ್ಯಕರ್ತರಾದ ನತಾಶಾ, ದೇವಂಗಾನಾ ಮತ್ತು ವಿದ್ಯಾರ್ಥಿ ಹೋರಾಟಗಾರ ಆಸಿಫ್ ಅವರ ಕೈವಾಡವಿದೆ ಎಂದು ಆರೋಪಿಸಿ ಅವರ ವಿರುದ್ಧ ಯುಎಪಿಎ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬಂಧಿತರು ಜಾಮೀನಿಗಾಗಿ ಎಷ್ಟೇ ಓಡಾಡಿದ್ದರೂ ಸಹ ದೆಹಲಿ ಪೊಲೀಸರ ಕಾರಣಕ್ಕೆ ಸೆಷನ್ಸ್ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿರಲಿಲ್ಲ. ಇದರ ವಿರುದ್ದ ವಿದ್ಯಾರ್ಥಿನಿಯರು ಮತ್ತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿ ಆದೇಶ ಬಿಡುಗಡೆ ಮಾಡಿರುವ ಕೋರ್ಟ್ ಕೂಡಲೇ ಇಬ್ಬರನ್ನೂ ಬಿಡುಗಡೆ ಮಾಡಬೇಕು ಎಂದು ಆದೇಶಿಸುವ ಮೂಲಕ ಒಂದು ವರ್ಷದ ಜೈಲುವಾಸಕ್ಕೆ ತೆರೆ ಎಳೆದಿದೆ.
” ಆಪಾದಿತರ ವಿಳಾಸ ಪರಿಶೀಲನೆ ಆಗದ ಕಾರಣ ಜಾಮೀನು ಜಾರಿಗೆ ತಡೆ ನೀಡಬೇಕು” ಎಂದು ದೆಹಲಿ ಪೋಲೀಸರು ನ್ಯಾಯಾಲಯವನ್ನು ಕೋರಿದ್ದರು. ಆದರೆ, ಈ ಕೋರಿಕೆಯನ್ನು ಒಪ್ಪದ ಕೋರ್ಟ್ ಇಂದು ಸಂಜೆಯ ಒಳಗೆ ಬಿಡುಗಡೆ ಮಾಡಬೇಕು ಎಂದು ಆದೇಶ ನೀಡಿದೆ. ಅವರನ್ನು ಬಿಡುಗಡೆ ಮಾಡದೇ ಇರುವುದಕ್ಕೆ ಪೊಲೀಸರು ಪರಿಶೀಲನಾ ಪ್ರಕ್ರಿಯೆಯಲ್ಲಿ ವಿಳಂಬ ಮಾಡುವುದು ಸರಿಯಾದ ಕಾರಣವಲ್ಲ ಎಂದು ಕೋರ್ಟ್ ತಿಳಿಸಿದೆ.
ನತಾಶಾ ನರ್ವಾಲ್ ಮತ್ತು ದೇವಂಗನಾ ಕಾಳಿತಾ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಾಗಿದ್ದಾರೆ. ಪಿಂಜ್ರಾ ತೋಡ್ ಎಂಬ ಸಂಘಟನೆಯ ಸದಸ್ಯರಾದ ಇವರು ಮೇ 2020 ರಿಂದಲೂ ಬಂಧನದಲ್ಲಿದ್ದಾರೆ. ಆಸಿಫ್ ಇಕ್ಬಾಲ್ ತನ್ಹಾ ಅವರು ಬಿ.ಎ. ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದಾರೆ.
ಉಮರ್ ಖಾಲಿದ್ಗೆ ಇಲ್ಲ ಬಿಡುಗಡೆ:
ಕಳೆದ 10 ತಿಂಗಳಿನಿಂದ ಉಮರ್ ಖಾಲಿದ್ ಸಹ ಜಾಮೀನಿಗೆ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಜಾಮೀನು ಲಭ್ಯವಾಗಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ನಾಯಕರು ದೆಹಲಿ ಜೈಲಿನಲ್ಲಿದ್ದಾರೆ.