ಮಂಗಳೂರು: ನಗರದಿಂದ ಬಜಪೆ ವಿಮಾನ ನಿಲ್ದಾಣ-ಕಟೀಲು ಸಂಪರ್ಕ ಕಲ್ಪಿಸುವ ಮರವೂರು ಸೇತುವೆಯಲ್ಲಿ ಬಿರುಕು ಕಂಡು ಬಂದಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ.
ಕರಾವಳಿ ಭಾಗದಲ್ಲಿ ಕಳೆದ ಮೂರು ನಾಲ್ಕು ದಿನದಿಂದ ಭಾರೀ ಮಳೆಯಾಗುತ್ತಿದೆ. ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಮರವೂರು ಸೇತುವೆಯ ಮೊದಲ ಅಂಕಣದ ( ಮೊದಲ ಪಿಲ್ಲರ್ ಬಳಿ) ಸುಮಾರು ಮೂರು ಅಡಿಗಳಷ್ಟು ಸೇತುವೆ ಕುಸಿದಿದೆ.
ಮಂಗಳೂರಿನಿಂದ ಬಜಪೆ ವಿಮಾನ ನಿಲ್ದಾಣ, ಕಟೀಲು ದೇವಸ್ಥಾನ, ಕಿನ್ನಿಗೋಳಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಇದಾಗಿದೆ. ಸೇತುವೆ ಬಿರುಕು ಬಿಟ್ಟ ಕಾರಣ ಈ ಪ್ರಮುಖ ಸಂಪರ್ಕ ಕೊಂಡಿ ತಪ್ಪಿದಂತಾಗಿದೆ.
ಮರವೂರು ಸೇತುವೆ ಬಿರುಕು ಹಿನ್ನೆಲೆಯಲ್ಲಿಕಾವೂರು -ಕೂಳೂರು- ಕೆ ಬಿ ಎಸ್- ಜೋಕಟ್ಟೆ- ಪೋರ್ಕೊಡಿ-ಬಜಪೆ ಅಥವಾ ಪಚ್ಚನಾಡಿ- ವಾಮಂಜೂರ್- ಗುರುಪುರ- ಕೈಕಂಬ- ಬಜಪೆ ಬದಲಿ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ.
2018ರಲ್ಲಿ ಬಂಟ್ವಾಳ ತಾಲೂಕಿನ ಮೂಲರಪಟ್ನದ ಸೇತುವೆ ಕುಸಿದು ಬಿದ್ದಿತ್ತು. ಇದರಿಂದಾಗಿ ಇಲ್ಲಿನ ಸಂಚಾರ ವ್ಯವಸ್ಥೆಗೂ ತೊಡಕಾಗಿತ್ತು. ನೂತನ ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಇದೀಗ ಜಿಲ್ಲೆಯ ಮತ್ತೊಂದು ಸೇತುವೆಯಲ್ಲಿ ಬಿರುಕು ಕಂಡುಬಂದಿದ್ದು, ಜಿಲ್ಲೆಯ ಸೇತುವೆಗಳ ಗುಣಮಟ್ಟ ಪರೀಕ್ಷೆ ನಡೆಸಬೇಕು ಎಂದು ಆಗ್ರಹ ಕೇಳಿಬಂದಿದೆ.
ಏರ್ ಪೋರ್ಟ್ ದಾರಿ: ಮಂಗಳೂರಿನ ಕಾವೂರಿನಿಂದ ಏರ್ ಪೋರ್ಟ್ ಗೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ವಿಮಾನ ನಿಲ್ದಾಣಕ್ಕೆ ಮಂಗಳೂರು ನಗರದಿಂದ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ -ಗುರುಪುರ ರಸ್ತೆಯಾಗಿ ಎರ್ ಪೂರ್ಟ್ ಗೆ ತೆರಳಲು ಸೂಚನೆ ನೀಡಲಾಗಿದೆ. ಉಡುಪಿ ಕಡೆಯಿಂದ ಬರುವವರು ಮೂಲ್ಕಿಯಲ್ಲಿ ತಿರುವು ಪಡೆದು ಕಿನ್ನಿಗೋಳಿ-ಕಟೀಲು ರಸ್ತೆಯಾಗಿ ಏರ್ ಪೋರ್ಟ್ ತೆರಳಲು ಸೂಚನೆ ನೀಡಲಾಗಿದೆ.