ಗಾಜಿಯಾಬಾದ್,ಜೂ.14:ಕೊರೋನಾ ಸೋಂಕಿನಿಂದ ಆರ್ಥಿಕ , ಮಾನಸಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಜನರು ಸಾಮಾನ್ಯ ಜನ ಜೀವನ ಆರಂಭಿಸ ಮುಂದಾಗಿದ್ದಾರೆ. ಈ ನಡುವೆಯೇ ಕೋಮು ಸೌಹಾರ್ದ ಕಲಕುವ ಘಟನೆಯೊಂದು ಉತ್ತರ ಪ್ರದೇಶದ ಸಮೀಪದ ಗಾಜಿಯಾಬಾದ್ನಲ್ಲಿ ನಡೆದಿದೆ. ಗಾಜಿಯಬಾದ್ ಜಿಲ್ಲೆಯಲ್ಲಿ ಸಾಮೂಜಿಕ ಪ್ರಾರ್ಥನೆ ಮುಗಿಸಿ ಬರುತ್ತಿದ್ದ ಮುಸ್ಲಿಂ ವ್ಯಕ್ತಿ ಮೇಲೆ ಕೆಲ ಗುಂಪು ಹಲ್ಲೆ ನಡೆಸಿ,ಅವರ ಗಡ್ಡ ಕತ್ತರಿಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಅಬ್ಧುಲ್ ಸಮದ್ ಎಂಬ ಹಿರಿಯ ವ್ಯಕ್ತಿ ಮೇಲೆ ದಾಳಿ ಮಾಡಿದ ಕೆಲ ಕಿಡಿಗೇಡಿಗಳು ಈ ಕ್ರೌರ್ಯತನವನ್ನು ತೋರಿದ್ದಾರೆ. ಜೂನ್ 5ರಂದು ಅಬ್ದುಲ್ ಸಮದ್ ಎಂಬ ವ್ಯಕ್ತಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದರು. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಅವರ ಮೇಲೆ ಕೆಲ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಅವರನ್ನು ಎಳೆದುಕೊಂಡ ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಕಿಡಿಗೇಡಿಗಳು ಅವರಿಗೆ ಜೈ ಶ್ರೀರಾಮ್ , ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ ಹೊಡೆದಿದ್ದಾರೆ. ಅಲ್ಲದೇ ಮರದ ಕಟ್ಟಿಗೆಯಿಂದ ಮನಬಂದಂತೆ ಥಳಿಸಿದ್ದಾರೆ.
ದಾಳಿಕೋರರ ಗುಂಪಿನಲ್ಲಿದ್ದ ಕ್ರೂರನೊಬ್ಬ ಸಮದ್ ಅವರ ಗಡ್ಡ ಕತ್ತರಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದ್ದು, ಸಮದ್, ತಮ್ಮನ್ನು ಬಿಟ್ಟು ಬಿಡುವಂತೆ ಅವರನ್ನು ಕೋರಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. ವಿಡಿಯೋದಲ್ಲಿ ಇಬ್ಬರು ಯುವಕರು ಕಂಡು ಬಂದಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಈ ಘಟನೆ ಕುರಿತು ಮಾತನಾಡಿರುವ ಸಮದ್, “ಆಟೋ ರಿಕ್ಷಾದಲ್ಲಿ ಮನೆಗೆ ಹೋಗುವ ಸಂದರ್ಭದಲ್ಲಿ ಇಬ್ಬರು ಯುವಕರು ಬಂದು ಆಟೋ ಏರಿದರು. ಈ ವೇಳೆ ಅವರು ನನ್ನನ್ನು ಒಂದು ರೂಂಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದರು. ನನ್ನನ್ನು ತಳ್ಳಿದ ಅವರು, ಮಂತ್ರ ಹೇಳುವಂತೆ ಬಲವಂತ ಪಡಿಸಿದರು. ನನ್ನ ಮೊಬೈಲ್ ಅನ್ನು ಈ ವೇಳೆ ಕಿತ್ತುಕೊಂಡರು. ಆಗ ಒಬ್ಬ ಬಿಳಿ ಉದ್ದ ಟಿ ಶರ್ಟ್ ಧರಿಸಿದ ಯುವಕ ನನ್ನ ಗಡ್ಡವನ್ನು ಚಾಕುವಿನಿಂದ ಕತ್ತರಿಸಿದ ಎಂದ ಸಮದ್ ಕಣ್ಣೀರು ಹಾಕಿದರು. ಇದೇ ವೇಳೆ ಅವರು ನನಗೆ ಇತರೆ ಮುಸ್ಲಿಂರ ಮೇಲೆ ನಡೆಸಿದ ದಾಳಿ ವಿಡಿಯೋ ತೋರಿಸಿ ಅವರನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದರು”.
ಪ್ರಕರಣ ಕುರಿತು ಪೊಲೀಸರು ದೂರು ದಾಖಲಿಸಿದ್ದು, ಘಟನೆಯ ಪ್ರಮುಖ ಆರೋಪಿಯಾಗಿರುವ ಪ್ರವೇಶ್ ಗುಜ್ಜರ್ ಎಂಬಾತನ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗೆ ಶೋಧ ಆರಂಭಿಸಿದ್ದಾರೆ. ಘಟನೆ ಕುರಿತು ಮಾತನಾಡಿರುವ ಲೋನಿಯ ಹಿರಿಯ ಪೊಲೀಸ್ ಅಧಿಕಾರಿ ಅತುಲ್ ಕುಮಾರ್ ಸೋನ್ಕರ್, ಪ್ರಕರಣ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.