ಬೆಂಗಳೂರು: ಕರ್ನಾಟಕದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬೇರೆ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಬೆಂಗಳೂರಿಗೆ ಹರಿದುಬರುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದ್ದು ಸೋಮವಾರ ಬೆಳಗ್ಗೆಯೇ ವಿಪರೀತ ಟ್ರಾಫಿಕ್ ಜಾಮ್ ಉಂಟಾಗಿದೆ. ಲಾಕ್ ಡೌನ್ ಎಂದು ಹೊರಗೆ ಹೋದವರು ಬೆಂಗಳೂರಿಗೆ ಬರುತ್ತಿದ್ದು ಸಾವಿರಾರು ವಾಹನಗಳು ರಸ್ತೆಯಲ್ಲಿ ಓಡಾಡುತ್ತಿವೆ.
ಈ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಹೊರಗಿನಿಂದ ಬೆಂಗಳೂರಿಗೆ ಬರುವವರಿಗೆ ಕಡ್ಡಾಯವಾಗಿ ಕೋವಿಡ್-19 ಟೆಸ್ಟ್ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ಸದ್ಯ ಸಕ್ರಿಯ ಕೋವಿಡ್ ಕೇಸುಗಳು ಕಡಿಮೆಯಾಗಿವೆ. ಹೊರಗಿನಿಂದ ಈ ಸಂದರ್ಭದಲ್ಲಿ ಜನರು ಹೆಚ್ಚೆಚ್ಚು ಬರುತ್ತಿದ್ದರೆ ಮುಂದಿನ 15 ದಿನಗಳಲ್ಲಿ ನಗರದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹೊರಗಿನಿಂದ ಬೆಂಗಳೂರಿಗೆ ಬರುವವರಿಗೆ ಕಡ್ಡಾಯವಾಗಿ ಪರಿಣಾಮಕಾರಿಯಾಗಿ ಕೊರೋನಾ ಟೆಸ್ಟ್ ಮಾಡಿಸುವ ಬಗ್ಗೆ ನಾನು ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.