ಮಂಗಳೂರು: ಕೋವಿಡ್ ಸೋಕಿನ ಪ್ರಮಾಣ ಕಡಿಮೆಗೊಳಿಸುವ ಸಲುವಾಗಿ ದ.ಕ. ಜಿಲ್ಲೆಯ 17 ಗ್ರಾ.ಪಂಗಳನ್ನು ಜೂ.14 ರಿಂದ ಬೆಳಗ್ಗೆ 9 ಗಂಟೆಯಿಂದ 21ರ ಬೆಳಗ್ಗೆ 9 ಗಂಟೆಯವರೆಗೆ ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ದ.ಕ.ಜಿ.ಪಂ ಸಿಇಒ ಅವರ ವರದಿ ಆಧರಿಸಿ 50 ಕ್ಕಿಂತ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳು ಇರುವ ಗ್ರಾಪಂಗಳನ್ನು ಸೀಲ್ ಡೌನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಮಂಗಳೂರು ತಾಲೂಕಿನ ಕೊಣಾಜೆ ಮತ್ತು ನೀರುಮಾರ್ಗ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಲ್ಲೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ ಮತ್ತು ಚಾರ್ಮಾಡಿ ಮುಂದಿನ ಒಂದು ವಾರಗಳ ಕಾಲ ಸೀಲ್ ಡೌನ್ ಆಗಲಿವೆ.
ಅದಲ್ಲದೆ ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು, ಕಡಬ ತಾಲೂಕಿನ ಸುಬ್ರಮಣ್ಯ ಹಾಗೂ ಸವಣೂರು ಸಹಿತ 17 ಗ್ರಾಪಂಗಳು ಸೀಲ್‌ಡೌನ್ ಆಗಲಿದೆ. ಈ 17 ಗ್ರಾಪಂಗಳಿಗೆ ಹೊರಗಿನಿಂದ ಬರುವವರು ಮತ್ತು ಅಲ್ಲಿಂದ ಹೊರಗೆ ಹೋಗುವವರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅಲ್ಲದೆ ನರ್ಸಿಂಗ್ ಹೋಂ, ಕ್ಲಿನಿಕ್, ಲ್ಯಾಬ್, ಟಲಿಮೆಡಿಸಿನ್, ರಕ್ತ ಸಂಗ್ರಹ ಕೇಂದ್ರ ಇತ್ಯಾದಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ.