janadhvani

Kannada Online News Paper

ರಾಜ್ಯದ ಸಿಎಂ ಸ್ಥಾನದಲ್ಲಿ ಬಿಎಸ್‌ವೈ ಮುಂದುವರೆಯುತ್ತಾರಾ? ಅಥವಾ ಕೆಳಗಿಳಿಯುತ್ತಾರಾ?

ನವದೆಹಲಿ,ಜೂನ್.13: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಹಲವು ದಿನಗಳಿಂದ ತಾರಕಕ್ಕೇರಿರುವ ಚರ್ಚೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಯಡಿಯೂರಪ್ಪನವರ ವಿರೋಧಿ ಬಣದವರು ನಾಯಕತ್ವ ಬದಲಾವಣೆಗೆ ಸಹಿ ಸಂಗ್ರಹವನ್ನೂ ಮಾಡಿದ್ದರು. ಇದಾದ ಬಳಿಕ ಹೈಕಮಾಂಡ್ ಹೇಳಿದರೆ ನಾನು ರಾಜೀನಾಮೆ ನೀಡಲೂ ಸಿದ್ಧನಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಆದರೆ, ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಸಿಎಂ ಬದಲಾವಣೆಯಿಲ್ಲ ಎಂದು ಹೈಕಮಾಂಡ್ ಸಂದೇಶ ರವಾನಿಸಿತ್ತು. ಇಷ್ಟೆಲ್ಲ ಆದರೂ ಕರ್ನಾಟಕದಲ್ಲಿ ಇನ್ನೂ ನಾಯಕತ್ವ ಬದಲಾವಣೆಯ ವದಂತಿ ಹೊಗೆಯಾಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಶಾಸಕರ ಜೊತೆ ಸಭೆ ನಡೆಸಲು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಿರ್ಧರಿಸಿದ್ದಾರೆ.

ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರವಾಗಿ ಪರ- ವಿರೋಧಿ ಗುಂಪುಗಳ ನಡುವೆ ಅರುಣ್ ಸಿಂಗ್ ಕಕ್ಕಾಬಿಕ್ಕಿಯಾಗಿದ್ದಾರೆ. ರಾಜ್ಯ ಬಿಜೆಪಿಯ ಉಸ್ತುವಾರಿ ಅರುಣ್ ಸಿಂಗ್ ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಚಾರದಲ್ಲಿ ಎರಡೂ ಕಡೆಯಿಂದ ಒತ್ತಡ ಇನ್ನೂ ಕಡಿಮೆಯಾಗಿಲ್ಲ. ನಾಯಕತ್ವ ಬದಲಾವಣೆಯ ಬಗ್ಗೆ ಗೊಂದಲ ಬಗೆಹರಿಸಲು ಬಿಜೆಪಿ ಕೋರ್ ಕಮಿಟಿ ಜೊತೆಗೆ ಸಚಿವರ ಸಭೆ ಕರೆದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೆಲವರು ಒತ್ತಡ ಹೇರಿದ್ದರು. ಹೀಗಾಗಿ, ಬಂಡಾಯಗಾರರ ಒತ್ತಾಯಕ್ಕೆ ಮಣಿದು ಅರುಣ್ ಸಿಂಗ್ ‘ಶಾಸಕರ ಸಭೆ’ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಶಾಸಕಾಂಗ ಪಕ್ಷದ ಸಭೆಯ ಬದಲಿಗೆ ‘ಶಾಸಕರ ಸಭೆ’ ಕರೆಯಲು ಬಿಜೆಪಿ ಪಕ್ಷದ ವತಿಯಿಂದ ಸಿದ್ಧತೆ ಆರಂಭವಾಗಿದೆ. ಜೂನ್ 17ಕ್ಕೆ ಬಿಜೆಪಿ ಶಾಸಕರ ಸಭೆ ನಡೆಯುವ ಸಾಧ್ಯತೆಯಿದೆ. ಜೂನ್ 16ಕ್ಕೆ‌ ಸಚಿವರ ಸಭೆ ನಡೆಸಲಿರುವ ಅರುಣ್ ಸಿಂಗ್ ಜೂನ್ 18ಕ್ಕೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಎಲ್ಲಾ ಸಭೆಗಳಿಂದಲೂ ಮಾಹಿತಿ ಸಂಗ್ರಹಿಸಲಿರುವ ಅರುಣ್ ಸಿಂಗ್ ಬಳಿಕ ಹೈಕಮಾಂಡಿಗೆ ವರದಿ ಸಲ್ಲಿಸಲಿದ್ದಾರೆ. ಹೀಗಾಗಿ, ಜೂನ್ 18ರ ಬಳಿಕ ಅರುಣ್ ಸಿಂಗ್ ಹೈಕಮಾಂಡ್ಗೆ ನೀಡುವ ವರದಿಯನ್ನು ಆಧರಿಸಿ ಯಡಿಯೂರಪ್ಪ ರಾಜ್ಯದ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಾರಾ? ಅಥವಾ ಕೆಳಗಿಳಿಯುತ್ತಾರಾ? ಎಂಬುದು ನಿರ್ಧಾರವಾಗಲಿದೆ ಎನ್ನಲಾಗಿದೆ.

ಮೂರ್ನಾಲ್ಕು ದಿನಗಳ ಹಿಂದೆ ಹೇಳಿಕೆ ನೀಡಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಇಲ್ಲ ಎಂದು ಹೇಳಿ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದರು. ಆದರೂ ಯಡಿಯೂರಪ್ಪನವರ ವಿರೋಧಿ ಬಣದ ಒತ್ತಡ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ, ಈ ವಿಚಾರಕ್ಕೆ ಅಂತ್ಯ ಹಾಡಲು ಹೈಕಮಾಂಡ್ ಮುಂದಾಗಿದೆ.

ಇನ್ನು, ಅರುಣ್ ಸಿಂಗ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಯಡಿಯೂರಪ್ಪ, ಅರುಣ್ ಸಿಂಗ್ ಹೇಳಿಕೆ ನನಗೆ 100ರಷ್ಟು ಬಲ ಬಂದಿದೆ. ಎರಡು ವರ್ಷ ಯಾವುದೇ ಬದಲಾವಣೆ ಇಲ್ಲ, ಬಿಎಸ್ ವೈ ನೇತೃತ್ವದಲ್ಲಿ ಒಳ್ಳೆಯ ಕೆಲಸವಾಗುತ್ತಿದೆ ಎಂದಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಜಾಸ್ತಿ ಆಗಿದೆ. ನನ್ನ ಮೇಲೆ ಪ್ರಧಾನಿ, ಅಮಿತ್ ಶಾ ಇಟ್ಟುಕೊಂಡಿರುವ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳುವೆ. ಪ್ರಾಮಾಣಿಕವಾಗಿ ಅಭಿವೃದ್ಧಿ ಪರ ಕೆಲಸ ಮಾಡುತ್ತೇನೆ. ಇನ್ನು 2 ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದಿದ್ದರು.

error: Content is protected !! Not allowed copy content from janadhvani.com