ಶಿವಮೊಗ್ಗ,ಜೂ.12: ಸಿಎಂ ಬಿಎಸ್ ಯಡಿಯೂರಪ್ಪ ಅವರ ಕನಸಿನ ಕೂಸಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯನ್ನು ಮುಂದಿನ ವರ್ಷಕ್ಕೆ ಸಿದ್ಧವಾಗುವ ಸಾಧ್ಯತೆ ಇದೆ. ಇಂದು ಇಲ್ಲಿನ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮುಂದಿನ ಜೂನ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಇದೇ ವೇಳೇ ಮಾತನಾಡಿದ ಅವರು 2022ರ ಜೂನ್ ಅಂತ್ಯದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ, ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಆಗುವುದರಿಂದ ದೊಡ್ಡ ದೊಡ್ಡ ಕೈಗಾರಿಕೆಗಳು ನಗರಕ್ಕೆ ಬರಲಿದೆ. ಇದರಿಂದ ಯುವಕರಿಗೆ ಉದ್ಯೋಗ ಅವಕಾಶ ದೊರೆಯಲಿದ್ದು, ಅಭಿವೃದ್ಧಿ ಸಾಕಾರವಾಗಲಿದೆ ಎಂದರು. ಮುಖ್ಯಮಂತ್ರಿ ಅವರು ಈ ಸಂದರ್ಭದಲ್ಲಿ ವಿಮಾನ ನಿಲ್ದಾಣ ಕಟ್ಟಡದ ವಿನ್ಯಾಸ ಅನಾವರಣ ಮಾಡಿದರು. ಬಳಿಕ ಮಾತನಾಡಿದ ಅವರು, ರನ್ ವೇ ಕಾಮಗಾರಿ, ಸಂಪರ್ಕ ರಸ್ತೆ, ಪೆರಿಮೀಟರ್ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಂಪೌಡ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, 15900 ಮೀಟರ್ ಪೈಕಿ 11500 ಮೀಟರ್ ಕಾಂಪೌಡ್ ನಿರ್ಮಾಣ ಪೂರ್ಣಗೊಳಿಸಲಾಗಿದೆ ಎಂದರು.
ಟರ್ಮಿನಲ್ ಕಟ್ಟಡದ ವಿನ್ಯಾಸ ಅನಾವರಣ 384 ಕೋಟಿ ರೂ ಆಗಿದೆ , ಫೇಸ್-1ರಲ್ಲಿ ಅನುಮೋದನೆಯಾದ ಮೊತ್ತ 220 ಕೋಟಿ ರೂ. ಫೇಸ್-2ರಲ್ಲಿ ಅನುಮೋದನೆಯಾದ ಮೊತ್ತ – 180 ಕೋಟಿ ರೂ. ರನ್‌ವೇ ನಿರ್ಮಾಣ ಹಾಗೂ ಇತರೆ ಕಾಮಗಾರಿಗಳ ನ್ನೊಳಗೊಂಡ ಪ್ಯಾಕೇಜ್-1ರ ಕಾಮಗಾರಿಯ ಅಂದಾಜು ಮೊತ್ತ ರೂ. 164.00 ಕೋಟಿಗಳು, ರೂ. 216.06 ಕೋಟಿಗಳಾಗಿವೆ. ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ, ಎ.ಟಿಸಿ ಟವರ್ ಕಟ್ಟಡ, ಎಲೆಕ್ಟಿಕಲ್ ಸಬ್ ಸ್ಟೇಷನ್, (2 ಸಂಖ್ಯೆ) ಟೈರ್ ಸ್ಟೇಷನ್, ಮೇಲ್ಮಟ್ಟದ ನೀರಿನ ತೊಟ್ಟಿ, ವಾಚ್ ಟವರ್ (09 ಸಂಖ್ಯೆ), ಪಂಪ್‌ಹೌಸ್, ನೆಲಮಟ್ಟದಲ್ಲಿ ನೀರಿನ ತೊಟ್ಟಿ, ಕೂಅಂಗ್ ಪಿಟ್ ಒಳಗೊಂಡ ಪ್ಯಾಕೇಜ್-02 ಕಾಮಗಾರಿಗೆ ಕರಾರು ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿ ಪ್ರಾರಂಭಿಸಬೇಕಾಗಿರುತ್ತದೆ. ಹೆಚ್ಚಿನ ಹಣಕಾಸು ಸಮಸ್ಯೆ ಇದ್ದರೂ ಹಣಕಾಸು ಜೋಡಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದರು.
ಇದೇ ವೇಳೆ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಕುರಿತು ಮಾತನಾಡಿದ ಅವರು, ಅಲ್ಲೂ ಕೂಡ ಶೀಘ್ರವಾಗಿ ಕಾಮಗಾರಿ ನಡೆಯಲಿದೆ. ಇಲ್ಲಿ ಕಾಮಗಾರಿ ನಡೆಸುತ್ತಿರುವವರೆ ಅಲ್ಲೂ ಆರಂಭಿಸಲು ಆಸಕ್ತಿ ತೋರಿದರೆ ಅವಕಾಶ ನೀಡಲಾಗುವುದು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೊಂದಿಗೆ ವೀಕ್ಷಸಲು ಸದ್ಯದಲ್ಲಿಯೇ ಹಾಸನಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಆರಂಭ ಮಾಡುತ್ತೇವೆ. ವಿಮಾನ ನಿಲ್ದಾಣಕ್ಕೆ ಜಮೀನು ಕೊಟ್ಟ ರೈತರು ಆತಂಕ ಪಡುವ ಹಾಗೆ ಇಲ್ಲ. ನಿಮಗೆ ಮನೆ ನಿರ್ಮಾಣಕ್ಕೆ ಜಾಗ ಹಾಗೂ ಇತರೆ ಸವಲತ್ತುಕೊಡುವ ಭರವಸೆಯನ್ನ ಈಡೇರಿಸಲಿದ್ದೇವೆ ಎಂದು ಭರವಸೆ ನೀಡಿದರು.