ಮಂಗಳೂರು: ಉದ್ಯೋಗ ಅರಸಿ ಕೆನಡಾಕ್ಕೆ ತೆರಳುವ ಯತ್ನದಲ್ಲಿದ್ದ ಶ್ರೀಲಂಕಾದ 38 ಯುವಕರ ತಂಡವೊಂದು ತಮಿಳುನಾಡು ಮೂಲಕ ಮಂಗಳೂರಿಗೆ ಆಗಮಿಸಿ ಅಕ್ರಮವಾಗಿ ಆಶ್ರಯ ಪಡೆಧಿದ ಬಗ್ಗೆ ಹಿರಿಯ ಅಧಿಧಿಕಾರಿಗಳ ಮೂಲಕ ಮಾಹಿತಿ ಪಡೆದ ನಗರ ಪೊಲೀಸರು 38 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿ, ಮಾನವ ಕಳ್ಳಸಾಗಾಟದ ಗಂಭೀರ ಪ್ರಕರಣ ಇದಾಗಿದ್ದು, ಆರೋಪಿಗಳು ಉತ್ತರ ಶ್ರೀಲಂಕಾ ಭಾಗದ ನಿವಾಸಿಗಳೆಂದು ತಿಳಿದುಬಂದಿದೆ. ಇವರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ವಿದೇಶಿ ಕಾಯಿದೆ, ಐಪಿಸಿ ಸೆಕ್ಷನ್ 14ರ ವಿದೇಶಿಯರ ಕಾಯಿದೆ 1964 ಸೆಕ್ಷನ್ 12(1)(ಎ) ಪಾಸ್‌ಪೋರ್ಟ್ ಕಾಯಿದೆ 1967ರಂತೆಯೂ ಪ್ರಕರಣ ದಾಖಲಾಗಿದೆ ಎಂದರು.
ಶ್ರೀಲಂಕಾದ ಏಜೆಂಟ್ ಕೆನಡಾ ದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಪ್ರತಿಯೊಬ್ಬರಿಂದ 5ರಿಂದ 10 ಲಕ್ಷ ಶ್ರೀಲಂಕಾ ಕರೆನ್ಸಿ ಪಡೆದುಕೊಂಡು, ಖಾಸಗಿ ಬೋಟ್ ಮೂಲಕ ಮಾ. 17ರಂದು ಚೆನ್ನೈಯ ತೂತುಕುಡಿಗೆ ಕಳುಹಿಸಿದ್ದ. ಅಲ್ಲಿ ಕೆಲ ದಿನಗಳ ಕಾಲ ಆರೋಪಿಗಳು ವಸತಿಗೃಹದಲ್ಲಿ ವಾಸ್ತವ್ಯವಿದ್ದರು. ಆದರೆ ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ತಪಾಸಣೆ ಆರಂಭಗೊಂಡ ಕಾರಣ ಬಂಧನ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿಗೆ ಬಸ್‌ನಲ್ಲಿ ಕಳುಹಿಸಿ ಅಲ್ಲಿಂದ ಹಂತಹಂತವಾಗಿ ನಾನಾ ವಾಹನಗಳಲ್ಲಿ ಮಂಗಳೂರಿಗೆ ಸಾಗಿಸಲಾಯಿತು.
ಆರೋಪಿಗಳು ಸುಮಾರು ಒಂದೂವರೆ ತಿಂಗಳಿನಿಂದ ಮಂಗಳೂರಿನ ಲಾಡ್ಜ್ ಮತ್ತು ಎರಡು ಮನೆಗಳನ್ನು ಪಡೆದು ವಾಸವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ತಂಡದಲ್ಲಿದ್ದ ಹಲವರನ್ನು ತಮಿಳುನಾಡಿನಲ್ಲೂ ಬಂಧಿಸಲಾಗಿದೆ. ತಮಿಳುನಾಡು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕಾರ್ಯಾಚರಣೆ ನಡೆಸಲಾಯಿತು.
78 ಗಂಟೆಗಳ ಶೋಧ!
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು ಸತತ 78 ಗಂಟೆ ಕಾರ್ಯಾಚರಣೆ ನಡೆಸಿ ಬಂದರು ಅಝೀಝುದ್ದೀನ್ ರಸ್ತೆಯಲ್ಲಿರುವ ಸೀ ಪೋರ್ಟ್,ಮಂಗಳೂರು ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಸಿಟಿ ಲಾಡ್ಜ್ ಹಾಗೂ ಕಸಬಾ ಬೆಂಗರೆಯ ಮನೆಯೊಂದರಿಂದ 38 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಇವರೆಲ್ಲರೂ ಕೂಲಿ ಕಾರ್ಮಿಕರೆಂದು ಹೇಳಿ ವಾಸ್ತವ್ಯ ಪಡೆದಿದ್ದರು. ವಶಕ್ಕೆ ಪಡೆದಿರು 38 ಮಂದಿಯನ್ನು ಮಾರ್ಗಸೂಚಿ ಪ್ರಕಾರ ಕೋವಿಡ್ ತಪಾಸಣೆಗೊಳಪಡಿಸಿ ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ಮುಂದಿನ ತನಿಖೆ ನಡೆಸಲಾಗುವುದು ಎಂದರು.ಡಿಸಿಪಿ ಹರಿರಾಮ್ ಶಂಕರ್, ಸಹಾಯಕ ಪೊಲೀಸ್ ಆಯುಕ್ತರಾದ ಎ.ಎ. ಹೆಗಡೆ, ರಂಜಿತ್ ಕುಮಾರ್, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಉಪಸ್ಥಿತರಿದ್ದರು.
ಆಂತರಿಕ ಭದ್ರತಾ ವೈಫಲ್ಯ ಸ್ಪಷ್ಟ
ಅಂತಾರಾಷ್ಟ್ರೀಯ ಮಟ್ಟದ ಮಾನವ ಕಳ್ಳಸಾಗಾಟದ ಗಂಭೀರ ಪ್ರಕರಣ ಇದಾಗಿದ್ದು, ಮಾರ್ಚ್ನಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಬಂದು ಬೆಂಗಳೂರು ಮೂಲಕ ಮಂಗಳೂರಿಗೆ ಆಗಮಿಸಿದ್ದಾರೆ. ಆಂತರಿಕ ಭದ್ರತಾ ವೈಫಲ್ಯವಾಗಿರುವುದು ಸ್ಪಷ್ಟವಾಗಿದೆ. ವಿದೇಶಿ ಪ್ರಜೆಗಳ ಅಕ್ರಮ ಪ್ರವೇಶ ಹಾಗೂ ವಾಸದ ಅಪರಾಧವೂ ಆಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.