janadhvani

Kannada Online News Paper

ಮತ್ತೊಂದು ಧರ್ಮವನ್ನು ಕೀಳಾಗಿ ಕಾಣುವ ಹಕ್ಕನ್ನು ಯಾರಿಗೂ ನೀಡಿಲ್ಲ- ಹೈಕೋರ್ಟ್

ಬೆಂಗಳೂರು: ಯಾವುದೇ ಧರ್ಮವನ್ನು ಪ್ರತಿಪಾದಿಸುವಾಗ ಮತ್ತೊಂದು ಧರ್ಮವನ್ನು ಕೀಳಾಗಿ ಬಿಂಬಿಸುವ ಮೂಲಭೂತ ಹಕ್ಕನ್ನು ಯಾವ ಧರ್ಮಕ್ಕೂ ಪ್ರದಾನ ಮಾಡಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಬಂಟ್ವಾಳದ ಪ್ರೆಸಿಲ್ಲಾ ಡಿಸೋಜ ಹಾಗೂ ಮಂಗಳೂರಿನ ಸ್ಯಾಮ್‌ಸನ್‌ ಜಾನ್‌, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಬಂಟ್ವಾಳ ನ್ಯಾಯಾಲಯ ತಮ್ಮ ವಿರುದ್ಧ ಕಾಗ್ನಿಜೆನ್ಸ್‌ ಪಡೆದು ವಿಚಾರಣೆ ಕೈಗೆತ್ತಿಕೊಂಡಿರುವ ಕ್ರಮ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ವಿಚಾರಣೆ ನಡೆಸಿದ ನ್ಯಾ. ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ಪೀಠ ತನ್ನ ತೀರ್ಪಿನಲ್ಲಿ ಈ ಆರೋಪಿತರ ವಿರುದ್ಧ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪವಿದೆ.

ಭಗವದ್ಗೀತೆ ಹಾಗೂ ಖುರಾನ್‌ನಲ್ಲಿ ಹೇಳಿರದ ವಿಷಯಗಳನ್ನು ಬೈಬಲ್‌ನಲ್ಲಿ ಹೇಳಿದ್ದು, ಭೂಮಿಗೆ ಸುನಾಮಿ ಬಂದಾಗ ಏಸು ಮಾತ್ರ ಕಾಪಾಡುತ್ತಾರೆ. ಬೈಬಲ್‌ ಮಾತ್ರ ಶಾಂತಿ ನೀಡುತ್ತದೆ ಎಂದು ಆರೋಪಿಗಳು ಹೇಳಿದ್ದಾರೆಂದು ಪೊಲೀಸರು ಐಪಿಸಿ ಸೆಕ್ಷನ್‌ 298ರಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ಅರ್ಜಿದಾರರು ಈ ಕ್ರಮವನ್ನು ಸಂವಿಧಾನದ ವಿಧಿ 14, 21 ಹಾಗೂ 25ರ ಉಲ್ಲಂಘನೆ ಎಂದು ಪ್ರತಿಪಾದಿಸಿದ್ದಾರೆ.

ಆದರೆ, ಯಾವುದೇ ಧರ್ಮದ ಕುರಿತು ಧಾರ್ಮಿಕ ಮುಖಂಡ ಅಥವಾ ವ್ಯಕ್ತಿ ಪ್ರತಿಪಾದಿಸುವಾಗ ಮತ್ತೊಂದು ಧರ್ಮವನ್ನು ಕೀಳಾಗಿ ಬಿಂಬಿಸುವ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ನೀಡಲಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ. ಮಧುರಾ ಎಂಬುವರು ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು.

error: Content is protected !! Not allowed copy content from janadhvani.com