ಕೋಝಿಕ್ಕೋಡ್| ಲಕ್ಷದ್ವೀಪದ ಜನರ ಇಚ್ಛೆಗೆ ವಿರುದ್ಧವಾಗಿ ಕಾನೂನು ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.ಅವರು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರಿಗೆ ದೂರವಾಣಿ ಮೂಲಕ ಈ ಭರವಸೆ ನೀಡಿದ್ದಾರೆ. ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಪರಿಚಯಿಸಿದ ಕಾನೂನುಗಳು ದ್ವೀಪವಾಸಿಗಳ ಜೀವನ ಮತ್ತು ಸಂಸ್ಕೃತಿಗೆ ಅಪಾಯವನ್ನುಂಟುಮಾಡುವ ಕಾರಣ ಶೀಘ್ರದಲ್ಲೇ ಮಧ್ಯಪ್ರವೇಶಿಸುವಂತೆ ಕೋರಿ ಕಾಂತಪುರಂ ಉಸ್ತಾದರು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು.ಪತ್ರಕ್ಕೆ ಪ್ರತ್ಯುತ್ತರವಾಗಿ ನೇರವಾಗಿ ಕರೆ ಮಾಡಿ ಕೇಂದ್ರ ಗೃಹ ಸಚಿವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾಗಿ ಕಾಂತಪುರಂ ಉಸ್ತಾದ್ ತಮ್ಮ ಫೇಸ್ಬುಕ್ ಪುಟದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದ್ದಾಗಿ ಗೃಹ ಸಚಿವರು ಹೇಳಿದ್ದಾರೆ. ಕೇಂದ್ರ ಸರ್ಕಾರವು ಲಕ್ಷದ್ವೀಪ ಜನರೊಂದಿಗಿದೆ. ದ್ವೀಪದ ಜನರ ಸಂಸ್ಕೃತಿ ಮತ್ತು ಜೀವನ ವಿಧಾನವನ್ನು ರಕ್ಷಿಸುವ ಕ್ರಮಗಳೊಂದಿಗೆ ಕೇಂದ್ರ ಸರ್ಕಾರ ನಿಲ್ಲುತ್ತದೆ. ಯಾವುದೇ ಆತಂಕ ಬೇಡ, ಜನ ವಿರೋಧಿ ಚಟುವಟಿಕೆಗಳು ಇರುವುದಿಲ್ಲ ಎಂದು ಅಮಿತ್ ಶಾ ಹೇಳಿದರು.
ಅದೇ ಸಮಯದಲ್ಲಿ, ದ್ವೀಪವಾಸಿಗಳು ಇನ್ನೂ ಆಳವಾದ ಆತಂಕದಲ್ಲಿದ್ದಾರೆ. ಕಳೆದ ಆರು ತಿಂಗಳಲ್ಲಿ ಅವರ ಮೇಲೆ ವಿಧಿಸಲಾದ ಕಾನೂನುಗಳನ್ನು ರದ್ದುಪಡಿಸಿಬೇಕು ಎಂದು ಕಾಂತಪುರಂ ಸಂಭಾಷಣೆ ವೇಳೆಯಲ್ಲಿ ಹೇಳಿದ್ದಾರೆ. ಜನರ ಇಚ್ಛೆಗೆ ವಿರುದ್ಧವಾಗಿ ಜಾರಿಗೊಳಿಸಲಾದ ಹೊಸ ಕಾನೂನುಗಳನ್ನು ರದ್ದುಪಡಿಸಿದರೆ ಮಾತ್ರ
ಜನರು ಆತಂಕದಿಂದ ಮುಕ್ತರಾಗುವರು ಎಂದು ಎ. ಪಿ. ಉಸ್ತಾದ್ ತಿಳಿಸಿದ್ದಾರೆ.