ಬೆಂಗಳೂರು: ಜೂನ್ 7ರ ಬೆಳಿಗ್ಗೆ 6 ಗಂಟೆವರಗೆ ರಾಜ್ಯದಲ್ಲಿ ಜಾರಿಯಲ್ಲಿದ್ದ ಕೊರೊನಾ ಲಾಕ್‌ಡೌನ್‌ನ್ನು ಜೂನ್ 14ರ ಬೆಳಿಗ್ಗೆ 6 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿದ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ, ಸೋಂಕಿನ ಸರಪಳಿ ಪೂರ್ತಿಯಾಗಿ ತುಂಡಾಗಿಲ್ಲ. ಹೀಗಾಗಿ ತಜ್ಞರ ಸಮಿತಿಯ ಸಲಹೆಯ ಮೇರೆಗೆ ಜಾರಿಯಲ್ಲಿರುವ ಕಠಿಣ ನಿರ್ಬಂಧಗಳನ್ನು ಒಂದು ವಾರಗಳ ಕಾಲ ಮುಂದೂಡಲಾಗಿದೆ, ಎಂದು ತಿಳಿಸಿದ್ದಾರೆ.
ಹೀಗಾಗಿ ಸದ್ಯ ಜಾರಿಯಲ್ಲಿ ಇರುವ ಮಾರ್ಗಸೂಚಿ ಒಂದು ವಾರಗಳ ಕಾಲ ಮುಂದುವರಿಯಲಿದೆ. ಜೂನ್ 14ವರೆಗೆ ಈಗಿನ ಮಾರ್ಗಸೂಚಿ ಮುಂದುವರಿಕೆಯಾಗಲಿದೆ.
ರಾಜ್ಯದ ಕೊರೊನಾ ಪಾಸಿಟಿವಿಟಿ ದರ ಶೇಕಡಾ ಐದಕ್ಕಿಂತ ಕಡಿಮೆಯಾದರೆ ಲಾಕ್‌ಡೌನ್ ತೆರವು ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದು, ಒಂದು ವಾರದ ನಂತರ ಲಾಕ್‌ಡೌನ್ ತೆರವುಗೊಳಿಸುವ ಬಗ್ಗೆ ಸುಳಿವು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಚಿವರಾದ ವಿ. ಸೋಮಣ್ಣ, ಗೋಪಾಲಯ್ಯ, ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್ ಉಪಸ್ಥಿತರಿದ್ದರು