janadhvani

Kannada Online News Paper

KSRTC ಲೋಗೋ: ಕೇರಳದೊಂದಿಗೆ ಸ್ಪರ್ಧೆಯಿಲ್ಲ- ಸಾರಿಗೆ ಸಚಿವ

ಬೆಂಗಳೂರು,ಜೂನ್.3: KSRTC ಹೆಸರು ಮತ್ತು ಲೋಗೋ ಕೇರಳ ರಾಜ್ಯದ ಪಾಲಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸಚಿವ, ಕರ್ನಾಟಕ – ಕೇರಳ ಸಾರಿಗೆಯಲ್ಲಿ ಪೈಪೋಟಿ ಏನಿಲ್ಲ. ಕೆಎಸ್ಆರ್ಟಿಸಿ ಹೆಸರು ಮತ್ತು ಲೋಗೋ ಬಳಸುವ ಕುರಿತು ಟ್ರೇಡ್ಮಾರ್ಕ್ ರಿಜಿಸ್ಟ್ರಿಯು ತೀರ್ಪು ನೀಡಿದೆ. ಆದರೆ ಈ ತೀರ್ಪಿನಲ್ಲಿ ಏನಿದೆ ಎಂಬ ಅಂಶವು ನಮಗೆ ಅಧಿಕೃತವಾಗಿ ಇನ್ನೂ ಬಂದಿಲ್ಲ. ಅದು ಲಭ್ಯವಾದ ನಂತರ ಮುಂದಿನ ನಿಲುವು ಮತ್ತು ಕಾನೂನು ಹೋರಾಟ ಏನು ಬಗ್ಗೆ ತೀರ್ಮಾನ ಮಾಡಲಾಗುವುದು ಎಂದಿದ್ದಾರೆ.

ದುರದೃಷ್ಟವಶಾತ್ ಅನಗತ್ಯವಾಗಿ ಈ ವಿವಾದ ಎದ್ದಿದೆ. ಖಾಸಗಿ ಸಂಸ್ಥೆಗಳಲ್ಲಾದರೆ ಈ ರೀತಿಯ ಹೆಸರು ಅಥವಾ ಟ್ರೇಡ್ಮಾರ್ಕ್ ಗಳಿಂದ ಅವರ ವ್ಯವಹಾರ ಮತ್ತು ಲಾಭಗಳ ಮೇಲೆ ಪ್ರಭಾವ ಉಂಟಾಗುತ್ತದೆ. ಆದರೆ ಸರ್ಕಾರಿ ಸಂಸ್ಥೆಗಳು ಹಾಗಲ್ಲ, ಇಲ್ಲಿ ಜನರ ಸೇವೆಯ ಮುಖ್ಯ. ಕರ್ನಾಟಕವಾಗಲಿ ಕೇರಳವಾಗಲಿ ಪರಸ್ಪರ ಸಾರಿಗೆ ಕ್ಷೇತ್ರದಲ್ಲಿ ಲಾಭ ಗಳಿಸುವ ಮೇಲಾಟಕ್ಕೆ ಅಥವಾ ಸ್ಪರ್ಧೆಗೆ ಮುಂದಾಗಿಲ್ಲ. ಸಾರ್ವಜನಿಕರ ಹಿತಾಸಕ್ತಿ ಮತ್ತು ಸೇವೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿವೆ. ಈ ವಿಷಯವನ್ನು ಯಾವುದೇ ರಾಜ್ಯಗಳು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳಬಾರದು. ಇದು ಕೇರಳಕ್ಕೆ ಸಂಭ್ರಮಪಡುವಂತಹ ವಿಚಾರವೇನಲ್ಲ ಎಂದಿದ್ದಾರೆ.

ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಎಂಬ ಹೆಸರಿದ್ದರೆ ಅದರಿಂದ ಕೇರಳ ರಾಜ್ಯದ ಕೆಎಸ್ಆರ್ಟಿಸಿ ಸಂಸ್ಥೆಗೆ ನಷ್ಟವೇನಿಲ್ಲ. ಕರ್ನಾಟಕವು ಕೇರಳದ ಸಾರಿಗೆ ಸಂಸ್ಥೆಗಳೊಂದಿಗೆ ಯಾವತ್ತೂ ಪೈಪೋಟಿಗೆ ಇಳಿದಿಲ್ಲ. ಇಂತಹ ವಿಷಯಗಳಲ್ಲಿ ಅನಗತ್ಯವಾಗಿ ವಿವಾದಗಳನ್ನು ಹೆಚ್ಚು ಮಾಡೋದು ಬೇಡ. ಪರಸ್ಪರ ರಾಜ್ಯಗಳಲ್ಲಿ ವಿವಾದಗಳನ್ನು ಬೆಳೆಸುವ ಪರಿಪಾಠಕ್ಕೆ ನಾವೆಲ್ಲರೂ ಅಂತ್ಯ ಹಾಡಬೇಕು. ದೇಶದ ಹಿತದೃಷ್ಟಿಯಿಂದ ರಾಜ್ಯ ರಾಜ್ಯಗಳ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾದ ವಿಷಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ( ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ಕಾರ್ಫೋರೇಷನ್) ಈ ಹೆಸರಿನಲ್ಲಿ ಬಸ್ಗಳು ರಸ್ತೆಗಿಳಿಯುತ್ತಿದ್ದವು. ಅತ್ತ ಕೇರಳದಲ್ಲಿ ಕೇರಳ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಹೆಸರಿನಲ್ಲಿ ರಸ್ತೆಗಿಳಿಯುತ್ತಿದ್ದ ಕೇರಳ ಸಾರಿಗೆ ಬಸ್ಗಳು ಸಂಚರಿಸುತ್ತಿದ್ದವು. ಎರಡೂ ರಾಜ್ಯದ ಸಾರಿಗೆ ಸಂಸ್ಥೆ ಬಸ್ಗಳು ಕೆಎಸ್ಆರ್ಟಿಸಿ ಟ್ರೇಡ್ ಮಾರ್ಕ್ ಬಳಸುತ್ತಿದ್ದವು. 2014ರಲ್ಲಿ ಕೇರಳಕ್ಕೆ ಈ ಟ್ರೇಡ್ ಮಾರ್ಕ್ ಬಳಸದಂತೆ ಕೇರಳಕ್ಕೆ ಕರ್ನಾಟಕ ನೋಟಿಸ್ ಜಾರಿ ಮಾಡಿತ್ತು.

ಕೇರಳ 1965ರಿಂದಲೇ ಕೆಎಸ್ಆರ್ಟಿಸಿ ಟ್ರೇಡ್ ಮಾರ್ಕ್ನ್ನು ಬಳಸುತ್ತಿದೆ. ಕರ್ನಾಟಕ ಸರ್ಕಾರ 1973ರಿಂದ ಕೆಎಸ್ಆರ್ಟಿಸಿ ಹೆಸರನ್ನು ಬಳಸುತ್ತಿದೆ. ಹೀಗಾಗಿ ನಾವು ಮೊದಲು ಕೆಎಸ್ಆರ್ಟಿಸಿ ಹೆಸರು ಬಳಸಿರುವುದರಿಂದ ನಮಗೆ ಈ ಟ್ರೇಡ್ ಮಾರ್ಕ್ ಕೊಡಬೇಕೆಂದು ಕೇರಳ ಕಾನೂನು ಹೋರಾಟ ನಡೆಸಿತ್ತು.

ಈ ಬಗ್ಗೆ ಕೇಂದ್ರ ಸರ್ಕಾರದ ಅಧೀನದ ಟ್ರೇಡ್ ಮಾರ್ಕ್ಗಳ ರಿಜಿಸ್ಟರ್ಗೆ ಕೇರಳ ಸರ್ಕಾರ ಅರ್ಜಿ ಸಲ್ಲಿಸಿತ್ತು. ಈ ಎರಡೂ ರಾಜ್ಯಗಳ ತಿಕ್ಕಾಟದ ಬಗ್ಗೆ ಸುದೀರ್ಘ 8 ವರ್ಷಗಳಿಂದ ನಡೆದಿದ್ದ ಕಾನೂನು ಹೋರಾಟದಲ್ಲಿ ಕೊನೆಗೆ ಅಂತಿಮವಾಗಿ ಕೇರಳಕ್ಕೆ ಜಯ ಸಿಕ್ಕಿದೆ.

error: Content is protected !! Not allowed copy content from janadhvani.com