janadhvani

Kannada Online News Paper

ರಾಜ್ಯದಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಪಡಿಸುವಂತೆ ಸಲಹೆ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹಬ್ಬಿದ್ದು, ಮೂರನೇ ಅಲೆಯ ಆತಂಕವೂ ಸೃಷ್ಟಿಯಾಗಿರುವ ಕಾರಣ ಶೈಕ್ಷಣಿಕ ವರ್ಷದ ಆರಂಭ ಹಾಗೂ ಪರೀಕ್ಷೆ ಆಯೋಜನೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿರುವ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ರಾಜ್ಯದಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸುವಂತೆ ತಿಳಿಸಿದ್ದಾರೆ. 2020-21ನೇ ಸಾಲಿನಲ್ಲಿ ಸರಿಯಾಗಿ ಪಾಠವನ್ನೇ ಮಾಡಿಲ್ಲ. ಪಠ್ಯ ಬೋಧನೆ ಮಾಡದೆ ಪರೀಕ್ಷೆ ಹೇಗೆ ಮಾಡೋದು? ಅಲ್ಲದೇ, ರಾಜ್ಯದಲ್ಲಿ ಕಳೆದ ವರ್ಷದಲ್ಲಿ ಇದ್ದ ಪರಿಸ್ಥಿತಿ ಈಗ ಇಲ್ಲ. ಹೀಗಾಗಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಕೊರೊನಾ ಬಳಿಕ ಪರೀಕ್ಷೆ ನಡೆಸುವ ಚಿಂತನೆಯನ್ನೂ ಕೈ ಬಿಡಬೇಕು. ಬೇಕಿದ್ದರೆ ಶಾಲಾ, ಕಾಲೇಜು ಮಟ್ಟದಲ್ಲಿ ಪರೀಕ್ಷೆ ನಡೆಸಲಿ. ಆಯಾ ಶಾಲಾ, ಕಾಲೇಜುಗಳಲ್ಲಿ ಎಷ್ಟು ಪಠ್ಯ ಬೋಧನೆ ಮಾಡಲಾಗಿದೆಯೋ ಅಷ್ಟಕ್ಕೆ ಮಾತ್ರ ಪರೀಕ್ಷೆ ನಡೆಸಿ ಫಲಿತಾಂಶ ಕೊಡುವುದು ಸೂಕ್ತ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪಾಠ ಪ್ರವಚನಗಳು ಸರಿಯಾಗಿ ನಡೆದೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ಪರೀಕ್ಷೆ ನಡೆಸುವುದು ಅಸಮಂಜಸ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ವೃತ್ತಿಪರ ಕೋರ್ಸ್‌ಗಳಿಗೆ ಪಿಯು ಫಲಿತಾಂಶ ಪರಿಗಣಿಸಲಾಗುವುದಿಲ್ಲ. ಆಯಾ ವೃತ್ತಿಪರ ಕೋರ್ಸ್‌ಗಳಿಗೆ ಪ್ರತ್ಯೇಕ ಪರೀಕ್ಷೆಯನ್ನೇ ಬರೆಯಬೇಕಿದೆ. ಹೀಗಾಗಿ ಬೋರ್ಡ್ ಪರೀಕ್ಷೆ ಅವಶ್ಯಕತೆ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಪರೀಕ್ಷೆ ಮಾಡಬೇಕು ಎನ್ನುವ ನಿರ್ಧಾರವನ್ನೂ ಕೈ ಬಿಡಿ ಎಂದು ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಸಲಹೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿರುವ ಬೆನ್ನಲ್ಲೇ ರಾಜ್ಯದಲ್ಲೂ ಬೋರ್ಡ್ ಪರೀಕ್ಷೆ ರದ್ದತಿಗೆ ಶಿಕ್ಷಣ ತಜ್ಞರು ಆಗ್ರಹಿಸಿದ್ದಾರೆ. ಆದರೆ, ಸದ್ಯ ರಾಜ್ಯ ಸರ್ಕಾರ ಪರೀಕ್ಷೆ ರದ್ದತಿ ಬಗ್ಗೆ ಯಾವುದೇ ಒಲವು ತೋರಿಸಿಲ್ಲ. ಅಲ್ಲದೇ, ಶಿಕ್ಷಣ ವ್ಯವಸ್ಥೆಯ ಪ್ರಮುಖ ಹಂತದಲ್ಲಿ ಪರೀಕ್ಷೆ ಇಲ್ಲದೇ ಪಾಸ್ ಮಾಡುವುದು ಸೂಕ್ತವಲ್ಲ. ವಿದ್ಯಾರ್ಥಿಗಳ ಪರಿಶ್ರಮ ವ್ಯರ್ಥವಾಗಬಾರದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಶಿಕ್ಷಣ ಸಚಿವರ ನಿಲುವು ಕೂಡಾ ಪರೀಕ್ಷೆಗೆ ಪೂರಕವಾಗಿರುವುದರಿಂದ ಅಂತಿಮ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

error: Content is protected !! Not allowed copy content from janadhvani.com