ಮನಾಮ: ಭಾರತ ಸೇರಿದಂತೆ ಐದು ದೇಶಗಳಿಂದ ಬಹ್ರೇನ್‌ಗೆ ಪ್ರವೇಶ ನಿರ್ಬಂಧಗಳು ಮೇ 23 ರ ಭಾನುವಾರದಿಂದ ಜಾರಿಗೆ ಬರಲಿವೆ.
ಇದರ ಪ್ರಕಾರ, ಬಹ್ರೇನ್ ನಾಗರಿಕರು, ನಿವಾಸ ವಿಸಾ ಹೊಂದಿರುವವರು ಮತ್ತು ಜಿಸಿಸಿ ನಾಗರಿಕರಿಗೆ ಮಾತ್ರ ಬಹ್ರೇನ್‌ಗೆ ಪ್ರವೇಶಿಸಲು ಅವಕಾಶವಿರುತ್ತದೆ. ಇದನ್ನು ನ್ಯಾಷನಾಲಿಟಿ, ಪಾಸ್‌ಪೋರ್ಟ್ ಎಂಡ್ ರೆಸಿಡೆಂಟ್ ಅಫೇರ್ಸ್ (ಎನ್‌ಪಿಆರ್‌ಎ) ಪ್ರಕಟಿಸಿವೆ.
ಹೊಸ ನಿಯಂತ್ರಣವು ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶದ ಜನರಿಗೆ ಅನ್ವಯಿಸುತ್ತದೆ. ಆರು ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ದೇಶದಿಂದ ನಿರ್ಗಮಿಸುವ 48 ಗಂಟೆಗಳ ಒಳಗೆ ನಡೆಸಿದ ಕೋವಿಡ್ ಪರೀಕ್ಷೆಯ ನಕಾರಾತ್ಮಕ ಪ್ರಮಾಣಪತ್ರವನ್ನು ಪ್ರಸ್ತುತಪಡಿಸಬೇಕು. ಪ್ರಮಾಣಪತ್ರದಲ್ಲಿ ಕ್ಯೂಆರ್ ಕೋಡ್ ಕಡ್ಡಾಯವಾಗಿದೆ.
ಬಹ್ರೇನ್‌ನ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಮತ್ತು ಐದನೇ ಹಾಗೂ ಹತ್ತನೇ ದಿನದಂದು ಕೋವಿಡ್ ಪರಿಶೀಲಿಸಬೇಕು. ತಮ್ಮ ಸ್ವಂತ ನಿವಾಸದಲ್ಲಿ ಅಥವಾ ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಪ್ರಾಧಿಕಾರವು ಅನುಮೋದಿಸಿದ ಹೋಟೆಲ್‌ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್ ಇರಬೇಕು. ಇದಕ್ಕಾಗಿ, ಸ್ವಂತ ಹೆಸರಿನಲ್ಲಿ ಅಥವಾ ಸಂಬಂಧಿಕರ ವಾಸ ಸ್ಥಳದ ಪುರಾವೆಗಳನ್ನು ನೀಡಬೇಕು. ಇಲ್ಲದಿದ್ದರೆ, ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಪ್ರಾಧಿಕಾರವು ಅನುಮೋದಿಸಿದ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಉಳಿಯಬೇಕಾಗಿದೆ.