janadhvani

Kannada Online News Paper

ರಾಜ್ಯದಲ್ಲಿ ಲಾಕ್‌ಡೌನ್ ಜೂನ್ 7 ರವರೆಗೆ ವಿಸ್ತರಣೆ- ನಿಯಂತ್ರಣಕ್ಕೆ ಪೋಲೀಸರಿಗೆ ಫುಲ್ ಪವರ್

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಮತ್ತೆ ವಿಸ್ತರಣೆಯಾಗಿದೆ. 2ನೇ ಹಂತದ ಲಾಕ್‌ಡೌನ್ 14 ದಿನಗಳ ಕಾಲ ಮುಂದುವರೆಯಲಿದೆ. ಜೂನ್ 7 ಬೆಳಗ್ಗೆ 6 ಗಂಟೆವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಆಗಿದೆ.ಇದೀಗ ಜಾರಿಯಲ್ಲಿ ಇರುವ ಲಾಕ್‌ಡೌನ್ ನಿಯಮಗಳೇ ಜೂನ್ 7ರವರೆಗೂ ಮುಂದುವರೆಯಲಿದೆ.

ಜನಸಾಮಾನ್ಯರು ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಅಗತ್ಯವಸ್ತುಗಳನ್ನು ಖರೀದಿ ಮಾಡಬಹುದಾಗಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.ಬೆಂಗಳೂರಿನಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆ ನಂತರವೂ ಜನರು ಓಡಾಡುತ್ತಿದ್ದಾರೆ. ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಈ ವಿಚಾರವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಮೊದಲಿನಂತೆಯೇ ಮುಂದುವರೆದಿರುವ ಕಾರಣ, ಬಿಗಿಯಾದ ಕ್ರಮ ಅನಿವಾರ್ಯ ಎಂದ ಬಿಎಸ್‌ವೈ, ಜನರು ಹೆಚ್ಚಿನ ನಿಗಾ ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಪತ್ತು ನಿರ್ವಹಣಾ ಸಮಿತಿ ಶಿಫಾರಸ್ಸಿನಂತೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಯಡಿಯೂರಪ್ಪ, ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬಗ್ಗೆ ಸಭೆಯಲ್ಲಿ ಆತಂಕ ವ್ಯಕ್ತವಾಗಿದೆ ಎಂದು ತಿಳಿಸಿದರು. ಲಾಕ್‌ಡೌನ್ ತೆರವು ಮಾಡಿದ್ರೆ ನಗರದಲ್ಲಿ ಸೋಂಕು ಹೆಚ್ಚಳವಾಗುವ ಆತಂಕ ವ್ಯಕ್ತಪಡಿಸಿದ ಬಿಎಸ್‌ವೈ, ಹಳ್ಳಿಗಳಲ್ಲಿ ಸೋಂಕು ಕಡಿಮೆಯಾಗುವವರೆಗೂ ಲಾಕ್‌ಡೌನ್ ಮುಂದುವರೆಯಲಿದೆ ಎಂದು ತಿಳಿಸಿದರು.

ಸದ್ಯ ಜಾರಿಯಲ್ಲಿರುವ ಕಠಿಣ ನಿರ್ಬಂಧಗಳೇ ಈ ಅವಧಿಯಲ್ಲೂ ಮುಂದುವರಿಯಲಿವೆ.
ಜನಸಾಮಾನ್ಯರಿಗೆ ಅನ್ವಯವಾಗುವ ನಿಯಮಗಳನ್ನು ನೋಡುವುದಾದರೆ,
ಯಾವುದಕ್ಕೆ ಅವಕಾಶವಿಲ್ಲ?

  • ಮೆಟ್ರೋ, ಆಟೋ ರಿಕ್ಷಾ, ಕ್ಯಾಬ್‌ ಇರುವುದಿಲ್ಲ. ತುರ್ತು ಬಳಕೆಗೆ ಮಾತ್ರ ಕ್ಯಾಬ್‌ಗಳನ್ನು ಬಳಸಬಹುದು.
  • ಖಾಸಗಿ, ಸರಕಾರಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ.
  • ಶಾಲೆ, ಕಾಲೇಜು ಯಾವುದೂ ಇಲ್ಲ.ಆನ್‌ಲೈನ್‌ ಶಿಕ್ಷಣ ಮಾತ್ರ ಮುಂದುವರಿಯಲಿದೆ.
  • ಹೋಟೆಲ್‌, ರೆಸ್ಟೋರೆಂಟ್‌, ಅತಿಥಿ ಗೃಹಗಳು ಇರುವುದಿಲ್ಲ.
  • ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಸೇವೆಗೆ ಅಡುಗೆ ಕೋಣೆ ತೆರೆದಿರಬಹುದು. ಪಾರ್ಸೆಲ್‌ ತೆಗೆದುಕೊಳ್ಳಲು ವಾಹನದಲ್ಲಿ ಹೋಗುವಂತಿಲ್ಲ, ನಡೆದುಕೊಂಡು ಬೇಕಿದ್ದರೆ ಹೋಗಬಹುದು. ಹೋಂ ಡೆಲಿವರಿಗೆ ಅವಕಾಶವಿದೆ.
  • ಸಿನಿಮಾ ಮಂದಿರ, ಜಿಮ್‌, ಸ್ಪಾ, ಶಾಪಿಂಗ್‌ ಮಾಲ್‌, ಯೋಗ ಕೇಂದ್ರ, ಕ್ರೀಡಾ ಚಟುವಟಿಕೆಗಳು, ಮನರಂಜನಾ ತಾಣಗಳು, ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳು, ಕ್ಲಬ್‌ಗಳು, ಬಾರ್, ಅಡಿಟೋರಿಯಂಗಳನ್ನು ತೆರೆಯುವಂತಿಲ್ಲ
  • ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲವೇ ಇಲ್ಲ.
  • ಎಲ್ಲಾ ಧಾರ್ಮಿಕ ಕ್ಷೇತ್ರಗಳು ಮುಚ್ಚರಲಿವೆ. ಪೂಜೆ ಸಲ್ಲಿಸಲು ಮಾತ್ರ ಅರ್ಚಕರಿಗೆ ಅವಕಾಶವಿದೆ.

ಯಾವುದಕ್ಕೆ ನಿರ್ಬಂಧವಿಲ್ಲ?

  • ಅಂತಾರಾಜ್ಯ ಮತ್ತು ರಾಜ್ಯದ ಒಳಗೆ, ಜಿಲ್ಲೆಯ ಒಳಗೆ ಜನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಹಿಂದೆ ತುರ್ತು ಸಂದರ್ಭದಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು.
  • ವಿಮಾನ, ರೈಲುಗಳ ಮಾತ್ರ ಓಡಾಡಲಿವೆ. ಇದಕ್ಕೆ ಟಿಕೆಟ್‌ನ್ನೇ ಪಾಸ್‌ ರೀತಿಯಲ್ಲಿ ಬಳಸಲು ಸೂಚಿಸಲಾಗಿದೆ.
  • ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಹಾಗೂ ಪಿಎನ್‌ಜಿ ಗ್ಯಾಸ್‌ ಕೇಂದ್ರಗಳು, ಅಂಚೆ ಕಚೇರಿ ತೆರೆದಿರಲಿವೆ.
  • ಬ್ಯಾಂಕ್‌, ಆರ್‌ಬಿಐ, ಆರ್‌ಬಿಐ ನಿಯಂತ್ರಿತ ಹಣಕಾಸು ಮಾರುಕಟ್ಟೆಗಳು, ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಇರಲಿವೆ.
  • ಆಯುಷ್‌, ಪಶು ಆರೋಗ್ಯ ಕೇಂದ್ರಗಳು, ಲ್ಯಾಬ್‌ಗಳು, ಕ್ಲಿನಿಕ್‌ಗಳು ಬ್ಲಡ್‌ ಬ್ಯಾಂಕ್‌ಗಳು, ಮೆಡಿಕಲ್‌ಗಳು ಸೇರಿದಂತೆ ಆರೋಗ್ಯ ಸೇವೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೂ ಮುಕ್ತ ಅವಕಾಶ ನೀಡಲಾಗಿದೆ.
  • ಎಲ್ಲಾ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಅನುಮತಿ ನೀಡಲಾಗಿದೆ.ಕೃಷಿಗೆ ಸಂಬಂಧಿಸಿದ ಅಂಗಡಿ, ಗೋದಾಮು, ಯಂತ್ರೋಪಕರಣಗಳಿಗೆ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಅನುಮತಿ ಇದೆ.ಸಂಬಂಧಿತ ಚಟುವಟಿಕೆಗಳಲ್ಲಿ ಮೀನುಗಾರಿಕೆ, ಕೋಳಿ, ಮಾಂಸ, ಡೈರಿ ಇತ್ಯಾದಿ. ಸೇರಿವೆ.
  • ಕಂಟೈನ್‌ಮೆಂಟ್‌ ಝೋನ್‌ ಹೊರಗಡೆ ಎಲ್ಲಾ ರೀತಿಯ ಸರಕು ಸಾಗಣೆಗೆ ಅನುಮತಿ ಇದೆ. ಖಾಲಿ ವಾಹನ ಓಡಾಟಕ್ಕೂ ಅವಕಾಶವಿದೆ. ಇದಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ.
  • ನ್ಯಾಯಬೆಲೆ ಅಂಗಡಿಗಳು, ದಿನಸಿ, ತರಕಾರಿ ಮತ್ತು ಹಣ್ಣು, ಹಾಲು ಮತ್ತು ಬೇಕರಿ ಉತ್ಪನ್ನಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವಿನ ಅಂಗಡಿಗಳು, ಮದ್ಯದ ಅಂಗಡಿಗಳು ಬೆಳಿಗ್ಗೆ 6 ರಿಂದ 10ಗಂಟೆವರೆಗೆ ಮಾತ್ರ ತೆರೆದಿರಲಿವೆ.ಹೋಮ್‌ ಡೆಲಿವರಿಗೆ ಅವಕಾಶವಿದೆ.
  • ತಳ್ಳುಗಾಡಿಗಳು, ಹಾಲಿನ ಬೂತ್‌ಗಳು, ಹಾಪ್‌ಕಾಮ್ಸ್‌ಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ತೆರೆದಿರಲಿವೆ.
  • ಬ್ಯಾಂಕ್‌, ಇನ್ಶೂರೆನ್ಸ್‌ ಕಂಪನಿ, ಎಟಿಎಂ ತೆರೆದಿರಲಿವೆ.
  • ಇ-ಕಾಮರ್ಸ್‌ ಮೂಲಕ ಎಲ್ಲಾ ರೀತಿಯ ಡೆಲಿವರಿಗೂ ಮುಕ್ತ ಅವಕಾಶವಿದೆ.
  • ಈಗಾಗಲೇ ನಿಗದಿಯಾಗಿರುವ ಮದುವೆಯಲ್ಲಿ 50 ಜನ ಮಾತ್ರ ಭಾಗವಹಿಸಬಹುದು. ಅಂತ್ಯಸಂಸ್ಕಾರದಲ್ಲಿ ಕೇವಲ 5 ಜನ ಭಾಗವಹಿಸಲು ಅವಕಾಶವಿದೆ. ಅಲ್ಲೂ ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲೇಬೇಕು.

error: Content is protected !! Not allowed copy content from janadhvani.com