janadhvani

Kannada Online News Paper

ಭಾರತದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ: ವರದಿ ವಿಶ್ವಾಸಾರ್ಹವಲ್ಲ- WHO

ನವದೆಹಲಿ: ಕೊರೋನಾವನ್ನು ನಿಯಂತ್ರಿಸುವ ಸಲುವಾಗಿ ಎಲ್ಲಾ ರಾಜ್ಯಗಳು ಕಳೆದ ಒಂದು ತಿಂಗಳಿನಿಂದ ಲಾಕ್ಡೌನ್ ಹೇರಿವೆ. ಹೀಗಾಗಿ ಭಾರತದಲ್ಲಿ ಸೋಮವಾರದಿಂದ ಹೊಸ ಕೊರೋನಾ ವೈರಸ್ ಪ್ರಕರಣಗಳು ಕುಸಿತವಾಗಿದೆ ಎಂದು ವರದಿಯಾಗಿತ್ತು. ಈ ವರದಿ ಅನೇಕರಲ್ಲಿ ಆಶಾವಾದಕ್ಕೆ ಕಾರಣವಾಗಿತ್ತು. ಆದರೆ, ಈ ವರದಿಯನ್ನು ಅಲ್ಲಗೆಳೆದಿರುವ ವಿಶ್ವ ಆರೋಗ್ಯ ಸಂಸ್ಥೆ (WHO), “ಭಾರತದ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. ಆದರೆ, ಈ ಭಾಗದಲ್ಲಿ ವ್ಯಾಪಕ ಕೊರೋನಾ ಪರೀಕ್ಷೆಗಳು ನಡೆಯುತ್ತಿಲ್ಲ. ಹೀಗಾಗಿ ಈ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವೈರಸ್‌ನ ಹೊಸ ರೂಪಾಂತರವು ಸೋಂಕಿನ ಉಲ್ಬಣಕ್ಕೆ ಕಾರಣವಾಗಿದ್ದರಿಂದ, ಕಳೆದ ತಿಂಗಳಿನಿಂದ ಪ್ರತಿದಿನ 4 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸೋಂಕಿತರ ಪ್ರಮಾಣ ಕುಸಿತ ಕಂಡರೂ ಸಹ, ಈ ಬಗ್ಗೆ ಖಚಿತತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜೊತೆಗೆ ಭಾರತದಲ್ಲಿ ಪತ್ತೆಯಾಗಿರುವ ಬಿ.1.617 ವೈರಸ್ ವಿಶ್ವದಾದ್ಯಂತ ಕಳವಳಕ್ಕೆ ಕಾರಣವಾಗಿದೆ.

“ದೇಶದ ಅನೇಕ ಭಾಗಗಳಲ್ಲಿ ಕೊರೋನಾ ಸೋಂಕು ಇನ್ನೂ ಉತ್ತುಂಗಕ್ಕೇರಿಲ್ಲ, ಅವು ಭವಿಷ್ಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಸಿದ್ದಾರೆ ಎಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ.

“ಅತಿ ಹೆಚ್ಚು ರಾಷ್ಟ್ರೀಯ ಪಾಸಿಟಿವ್‌ ದರ ಶೇ.20 ಆಗಿದ್ದರೂ, ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಹೆಚ್ಚಿನ ರಾಜ್ಯಗಳಲ್ಲಿ ಪರೀಕ್ಷೆ ಇನ್ನೂ ಅಸಮರ್ಪಕವಾಗಿದೆ. ಹೆಚ್ಚುತ್ತಿರುವ ಕೊರೋನಾ ಪಾಸಿಟಿವ್‌ ದರವನ್ನು ನೋಡಿದಾಗ ನಾವು ಸಾಕಷ್ಟು ಪರೀಕ್ಷಿಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ” ಎಂದು ಸ್ವಾಮಿನಾಥನ್‌ ಹೇಳಿದ್ದಾರೆ.

ಕಳೆದ ತಿಂಗಳಿನಿಂದ ತೀವ್ರವಾಗಿ ಏರುತ್ತಲೆ ಇದ್ದ ಕೊರೋನಾ ಸೋಂಕು ಕಳೆದ 24 ಗಂಟೆಗಳಲ್ಲಿ ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ. ಕಳೆದ ಒಂದು ದಿನದಲ್ಲಿ ಹೊಸ ಕೊರೋನಾ ಪಾಸಿಟಿವ್‌ ಪ್ರಕರಣ 281,386 ಇಳಿದೆ. ಏಪ್ರಿಲ್ 21 ರ ನಂತರ ಇದೇ ಮೊದಲ ಬಾರಿಗೆ 3 ಲಕ್ಷಕ್ಕಿಂಲೂ ಕಡಿಮೆ ಪ್ರಕರಣ ವರದಿಯಾಗಿದೆ. ದೇಶದಲ್ಲಿ ದೈನಂದಿನ ಸಾವುಗಳು 4,000 ಕ್ಕಿಂತ ಹೆಚ್ಚಿವೆ ಎಂದು ವರದಿಯಾಗಿದೆ.

error: Content is protected !! Not allowed copy content from janadhvani.com