janadhvani

Kannada Online News Paper

ಹತ್ಯಾಕಾಂಡ ಮುಂದುವರಿಸಿದ ಇಸ್ರೇಲ್: 8 ಮಕ್ಕಳು ಸಹಿತ 10 ಮಂದಿ ಬಲಿ- ಮರಣ ಸಂಖ್ಯೆ 140 ಕ್ಕೆ ಏರಿಕೆ

ಜೆರುಸಲೆಂ: ಗಾಜಾದಲ್ಲಿ ಹತ್ಯಾಕಾಂಡ ಮುಂದುವರಿಸಿದ ಇಸ್ರೇಲ್. ಇಂದು, ಗಾಜಾ ಪ್ರದೇಶದ ಶಾತಿಅ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಎಂಟು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಹತ್ತು ಜನರು ಮೃತಪಟ್ಟಿದ್ದಾರೆ. ಕೊಲ್ಲಲ್ಪಟ್ಟವರೆಲ್ಲರೂ ಒಂದೇ ಕುಟುಂಬದ ಸದಸ್ಯರು.

ಯಾವುದೇ ಪ್ರಚೋದನೆಯಿಲ್ಲದೆ ಇಸ್ರೇಲಿ ವೈಮಾನಿಕ ದಾಳಿಯು ಮುಂಜಾನೆ ಈ ಪ್ರದೇಶವನ್ನು ಅಪ್ಪಳಿಸಿತು. ದಾಳಿಯ ನಂತರ ಕಟ್ಟಡಗಳ ಅವಶೇಷಗಳನ್ನು ಪರೀಕ್ಷಿಸುವಾಗ ಮಕ್ಕಳು ಸೇರಿದಂತೆ 10 ಜನರ ಮೃತ ಶರೀರವನ್ನು ರಕ್ಷಕರು ಪತ್ತೆ ಮಾಡಿದ್ದಾರೆ. ಹೆಚ್ಚಿನ ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರಬಹುದೆಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆಯಲ್ಲಿ ಚಿಕ್ಕ ಮಗು ಸೇರಿದಂತೆ ಹದಿನೈದು ಜನರು ಗಾಯಗೊಂಡಿದ್ದಾರೆ. ಅಂತರರಾಷ್ಟ್ರೀಯ ಸಮುದಾಯದ ತೀವ್ರ ವಿರೋಧದ ಹೊರತಾಗಿಯೂ ಗಾಜಾ ವಿರುದ್ಧ ಇಸ್ರೇಲಿ ಆಕ್ರಮಣ ಸತತ ಆರನೇ ದಿನವೂ ಮುಂದುವರೆದಿದೆ. ಇಂದಿನ ಇಸ್ರೇಲಿ ದಾಳಿಯೊಂದಿಗೆ 39 ಮಕ್ಕಳು ಸಮೇತ ಮರಣ ಸಂಖ್ಯೆ 140 ಕ್ಕೆ ಏರಿದೆ. ಶಾತಿಅ್ ಗಾಜಾ ಪ್ರದೇಶದ ಮೂರನೇ ಅತಿದೊಡ್ಡ ನಿರಾಶ್ರಿತರ ಶಿಬಿರವಾಗಿದೆ. ಇದು ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಕೇವಲ 0.52 ಚದರ ಕಿಲೋಮೀಟರ್ ವಿಸ್ತೀರ್ಣವುಳ್ಳ ಇದು ಸುಮಾರು 85,000 ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗೆ ನೆಲೆಯಾಗಿದೆ.

error: Content is protected !! Not allowed copy content from janadhvani.com