ನವದೆಹಲಿ: ದೇಶದಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿವುರುವ ಇಂತಹ ಸಂದರ್ಭದಲ್ಲಿಯೂ ರೆಮ್‌ಡೆಸಿವಿರ್ ಔಷಧಿಯನ್ನು ಆಕ್ಸಿಜನ್ ಸಪೋರ್ಟ್ ಇರುವವರಿಗೆ ಮಾತ್ರ ನೀಡಬೇಕು ಎಂಬ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದನ್ನು ಗಮನಿಸಿದರೆ ಸರ್ಕಾರವು ಜನರು ಸಾಯಬೇಕೆಂದು ಬಯಸಿದಂತೆ ಕಾಣುತ್ತಿದೆ ಎಂದು ದೆಹಲಿ ಹೈಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರ ಅಲ್ಪತನದ್ದಾಗಿದೆ. ಯೋಚಿಸದೇ ನಿರ್ಧಾರವನ್ನು ಕೈಗೊಂಡಂತಿದೆ. ಇದು ತಪ್ಪು. ಈಗ ಆಮ್ಲಜನಕ ಸಪೋರ್ಟ್ ಇಲ್ಲದ ಕೊರೊನಾ ರೋಗಿಗಳಿಗೆ ರೆಮ್‌ಡಿಸಿವಿರ್ ಸಿಗುವುದಿಲ್ಲ. ಇದು ನೀವು ಜನರು ಸಾಯಬೇಕೆಂದು ಬಯಸುತ್ತಿದ್ದೀರಿ ಎಂಬಂತೆ ತೋರುತ್ತಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಔಷಧದ ಕೊರತೆಯನ್ನು ಕಡಿಮೆ ಮಾಡಲು ಕೇಂದ್ರವು ಮಾರ್ಗಸೂಚಿಯನ್ನು ಬದಲಾಯಿಸುತ್ತಿದೆ. ಇದು ಸಂಪೂರ್ಣ ಅಸಮರ್ಪಕ ನಿರ್ವಹಣೆ ಎಂದು ಹೈಕೋರ್ಟ್ ಹೇಳಿದೆ.ಅಗತ್ಯವಿದ್ದ 6 ಡೋಸ್ ರೆಮ್‌ಡಿಸಿವಿರ್ ಔಷಧದ ಬದಲು ಕೇವಲ 3 ಡೋಸ್ ಪಡೆದ ಕೊರೊನಾ ಸೋಂಕಿತ ವಕೀಲರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೇಂದ್ರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ರೋಗಿಯು ಮಂಗಳವಾರ ರಾತ್ರಿ ಉಳಿದ ಮೂರು ಡೋಸ್ ಔಷಧಿ ಪಡೆದಿದ್ದಾರೆ.