janadhvani

Kannada Online News Paper

ಸಿದ್ದೀಖ್ ಕಾಪ್ಪನ್ ರ ಆರೋಗ್ಯ ಸಂರಕ್ಷಣೆಗೆ ಮುಂದಾಗಬೇಕು- ಪ್ರಧಾನಿಗೆ ಎ.ಪಿ.ಉಸ್ತಾದ್ ಪತ್ರ

ಕೋಝಿಕ್ಕೋಡ್| ಮಾನವೀಯ ನೆಲೆಯಲ್ಲಿ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರ ಆರೋಗ್ಯವನ್ನು ಸಂರಕ್ಷಿಸಲು ಮಧ್ಯಪ್ರವೇಶಿಸುವಂತೆ ಕೋರಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಪತ್ರ ಬರೆದಿದ್ದಾರೆ.

ಸಿದ್ದೀಕ್ ಕಾಪ್ಪನ್ ಪ್ರಸ್ತುತ ಉತ್ತರ ಪ್ರದೇಶದ ಮಥುರಾ ವೈದ್ಯಕೀಯ ಕಾಲೇಜಿನಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಕೋವಿಡ್ ಮತ್ತು ಇತರ ಕಾಯಿಲೆಗಳಿಂದಾಗಿ ಆರೋಗ್ಯದ ಸ್ಥಿತಿ ಶೋಚನೀಯವಾಗಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದು ಬಂದಿದೆ.

ಅವರಿಗೆ ಮೂಲಭೂತ ಮಾನವ ಹಕ್ಕುಗಳನ್ನು ನಿರಾಕರಿಸಲಾಗಿದೆ, ಕೈಕೋಳದಲ್ಲಿ ಬಂಧಿಸಲಾಗಿದ್ದು, ಸ್ನಾನಗೃಹಕ್ಕೆ ಹೋಗಲು ಕೂಡ ಸಾಧ್ಯವಾಗದೆ ಬಹುದಿನಗಳಿಂದ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.

ಆದ್ದರಿಂದ,ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯವಿದ್ದಲ್ಲಿ, ಉತ್ತಮ ಚಿಕಿತ್ಸೆಗಾಗಿ ಅವರನ್ನು ನವದೆಹಲಿಯ ಏಮ್ಸ್ ಅಥವಾ ಕೇರಳಕ್ಕೆ ವರ್ಗಾಯಿಸಲು ಪ್ರಯತ್ನಿಸುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

2020 ರ ಅಕ್ಟೋಬರ್ 5 ರಂದು ಸಿದ್ದೀಕ್ ಕಾಪ್ಪನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು, ಪ್ರಬಲ ಜಾತಿಯ ನಾಲ್ಕು ಮಂದಿಯಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ 19 ವರ್ಷದ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಹಥ್ರಾಸ್ಗೆ ತೆರಳುತ್ತಿದ್ದಾಗ, ಕಠಿಣ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಅಥವಾ ಯುಎಪಿಎ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಯೊಂದಿಗೆ ಪತ್ರಕರ್ತ ಸಂಪರ್ಕ ಹೊಂದಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ಆರೋಪಿಸಿದ್ದಾರೆ. ಅವರನ್ನು ಬಂಧಿಸಿದಾಗಿನಿಂದ ಮಥುರಾದ ಜೈಲಿನಲ್ಲಿ ಇರಿಸಲಾಗಿದೆ.

error: Content is protected !! Not allowed copy content from janadhvani.com