ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ದಿನದಿಂದ ದಿನಕ್ಕೆ ಕೈಮೀರುತ್ತಿದೆ. ಅಪಾರ ಸಂಖ್ಯೆಯ ಜನ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ 11 ರಾಜ್ಯಗಳು ಇದರಿಂದ ತೀವ್ರ ಅನಾಹುತ್ತಕ್ಕೆ ಒಳಗಾಗಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಎಲ್ಲಾ 11 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.
ಆದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗಿನ ಚರ್ಚೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಉಂಟಾಗಿರುವ ಆಮ್ಲಜನಕದ ಬಿಕ್ಕಟ್ಟಿನ ಬಗ್ಗೆ ಅರವಿಂದ್ ಕೇಜ್ರಿವಾಲ್ ಮಾತನಾಡುತ್ತಿದ್ದಂತೆ ಅದರ ನೇರ ಪ್ರಸಾರ ಎಲ್ಲ ಟೆಲಿವಿಷನ್‌ಗಳಲ್ಲಿ ಪ್ರಸಾರವಾಗಿದೆ. ಆಂತರಿಕ ಸಭೆ ನೇರ ಪ್ರಸಾರವಾಗುವುದನ್ನು ಪ್ರಧಾನಿ ನರೇಂದ್ರ ಮೋದಿ ಆಕ್ಷೇಪಿಸಿದ್ದಾರೆ, ಇದಕ್ಕೆ ಅರವಿಂದ್ ಕೇಜ್ರಿವಾಲ್ ವಿಷಾದ ವ್ಯಕ್ತಪಡಿಸಿದ್ದಾರೆ.
ಆದರೆ, ಅರವಿಂದ್ ಕೇಜ್ರಿವಾಲ್ ನಿಯಮಗಳನ್ನು ಮೀರಿದ್ದಾರೆ ಎಂದು ಆರೋಪಿಸಿ ಹಲವು ಬಿಜೆಪಿಗರು ಅವರನ್ನ ಟೀಕಿಸಿದ್ದಾರೆ. ಆಂತರಿಕವಾಗಿ ನಡೆಯಬೇಕಿದ್ದ ಸಭೆಯನ್ನು ಟಿವಿಗಳಲ್ಲಿ ಪ್ರಸಾರ ಮಾಡಿರುವುದರ ಹಿಂದೆ ರಾಜಕೀಯ ಕಾರಣವಿದೆ ಎಂದು ಆರೋಪಿಸಿದ್ದಾರೆ.
ದೆಹಲಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ದೊಡ್ಡ ದುರಂತ ಸಂಭವಿಸಬಹುದು. ನಗರಕ್ಕೆ ಪ್ರವೇಶಿಸದಂತೆ ಆಮ್ಲಜನಕ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗುತ್ತಿದೆ. ದಯವಿಟ್ಟು ಸಹಾಯ ಮಾಡಿ ಎಂದು ಅರವಿಂದ್ ಕೇಜ್ರಿವಾಲ್ ಕೈ ಮುಗಿದು ಕೇಳಿಕೊಂಡಿದ್ದಾರೆ.
“ದೆಹಲಿಯಲ್ಲಿ ಆಮ್ಲಜನಕ ಉತ್ಪಾದಿಸುವ ಸ್ಥಾವರವಿಲ್ಲದಿದ್ದರೆ ದೆಹಲಿಯ ಜನರಿಗೆ ಆಮ್ಲಜನಕ ಸಿಗುವುದಿಲ್ಲವೇ? ದೆಹಲಿಗೆ ಮೀಸಲಾದ ಆಮ್ಲಜನಕ ಟ್ಯಾಂಕರ್‌ಗಳಿಗೆ ಬೇರೆ ರಾಜ್ಯಗಳಲ್ಲಿ ತಡೆಯೊಡ್ಡಿದಾಗ, ನಾನು ಕೇಂದ್ರ ಸರ್ಕಾರದಲ್ಲಿ ಯಾರೊಂದಿಗೆ ಮಾತನಾಡಬೇಕು ಎಂದು ದಯವಿಟ್ಟು ಸೂಚಿಸಿ” ಎಂದು ಪ್ರಶ್ನಿಸಿದ್ದಾರೆ.
ದೆಹಲಿಯ ಆಮ್ಲಜನಕದ ಕೊರತೆಯನ್ನು ಪರಿಹರಿಸಲು ಪಶ್ಚಿಮ ಬಂಗಾಳ ಮತ್ತು ಒಡಿಶಾದಿಂದ ಆಮ್ಲಜನಕದ ವಿಮಾನ ಹಾರಾಟಕ್ಕೆ ಅನುಕೂಲವಾಗುವಂತೆ ಪ್ರಧಾನಿ ಮೋದಿ ಅವರನ್ನು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಈ ಸಂವಹನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಉದ್ದೇಶಿಸಿರಲಿಲ್ಲ. ಕೇಜ್ರಿವಾಲ್ ಇಂತಹ ಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದು ಸರ್ಕಾರದ ಮೂಲಗಳು ಆರೋಪಿಸಿವೆ.
ಮೊದಲ ಬಾರಿಗೆ, ಮುಖ್ಯಮಂತ್ರಿಗಳೊಂದಿಗಿನ ಪ್ರಧಾನಮಂತ್ರಿಯವರ ಖಾಸಗಿ ಸಂಭಾಷಣೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕೇಜ್ರಿವಾಲ್ ಅವರ ಸಂಪೂರ್ಣ ಭಾಷಣವು ಯಾವುದೇ ಪರಿಹಾರಕ್ಕಾಗಿ ಅಲ್ಲ, ಆದರೆ ರಾಜಕೀಯವನ್ನು ಮಾಡುವುದು ಮತ್ತು ಜವಾಬ್ದಾರಿಯಿಂದ ತಪ್ಪಿಸುವುದಕ್ಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು, ಮುಖ್ಯಮಂತ್ರಿಯವರ ಮಾತುಗಳನ್ನು ನೇರಪ್ರಸಾರ ಮಾಡಲಾಗಿದೆ. ಏಕೆಂದರೆ ಈ ಸಂವಾದವನ್ನು ನೇರ ಹಂಚಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರದಿಂದ ಯಾವುದೇ ಲಿಖಿತ ಅಥವಾ ಮೌಖಿಕ ಸೂಚನೆ ಬಂದಿರಲಿಲ್ಲ. ಸಭೆಯಲ್ಲಿ ಯಾವುದೇ ಗೌಪ್ಯ ಮಾಹಿತಿಯಿಲ್ಲದ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ನೇರವಾಗಿ ಹಂಚಿಕೊಳ್ಳುವಂತಹ ಪರಸ್ಪರ ಕ್ರಿಯೆಗಳು ನಡೆದಿವೆ. ಆದರೂ, ಯಾವುದಾದರೂ ಅನಾನುಕೂಲತೆ ಉಂಟಾಗಿದ್ದರೇ ನಾವು ವಿಷಾದಿಸುತ್ತೇವೆ” ಎಂದು ದೆಹಲಿ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದೆ.
ಈ ನಡುವೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್ ಡಿಸಿವಿರ್ ಹೆಚ್ಚುವರಿ ಉತ್ಪಾದನೆ ಹಾಗೂ ಪೂರೈಕೆಗೆ ಕೇಂದ್ರ ಸರ್ಕಾರ ಸಿದ್ಧವಿದ್ದು, ರಾಜ್ಯ ಸರ್ಕಾರಗಳೂ ಪರಸ್ಪರ ಸಹಕರಿಸುವ ಮೂಲಕ ಸವಾಲನ್ನು ಸಮರ್ಥವಾಗಿ ಎದುರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಅವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ವಿಷಯ ತಿಳಿಸಿದರು.