ನವದೆಹಲಿ,ಏ. 24: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ.
ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಹಾಗೂ ಏಪ್ರಿಲ್ 17ರಿಂದ ದಿನ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ.
ಶುಕ್ರವಾರ 3,46,786 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 2,19,838 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,66,10,481ಕ್ಕೆ ಏರಿಕೆ ಆಗಿದೆ.
ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಶುಕ್ರವಾರ 2,624 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 1,89,544ಕ್ಕೆ ಏರಿಕೆ ಆಗಿದೆ