ಲಕ್ನೋ,ಏ.19: ಉತ್ತರ ಪ್ರದೇಶದಲ್ಲಿ ಕೊರೋನಾ ಎರಡನೇ ಅಲೆ ತೀವ್ರಗೊಂಡಿದ್ದು, ಸೋಂಕಿನ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಲಹಾಬಾದ್ ಹೈ ಕೋರ್ಟ್ ಪ್ರಯಾಗ್ ರಾಜ್, ಲಕ್ನೋ, ವಾರಣಾಸಿ, ಕಾನ್ಫುರ ಮತ್ತು ಗೋರಖ್ಪುರದಲ್ಲಿ ಲಾಕ್ಡೌನ್ ಮಾಡುವಂತೆ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸೂಚನೆ ನೀಡಿದೆ. ಏ. 26ರವರೆಗೆ ಎಲ್ಲಾ ಶಾಪಿಂಗ್ ಮಾಲ್, ಕಾಂಪ್ಲೆಕ್ಸ್, ರೆಸ್ಟೋರೆಂಟ್, ಹೋಟೆಲ್, ತರಕಾರಿ ಅಂಗಡಿ ಮತ್ತು ಕಮರ್ಷಿಯಲ್ ಶಾಪ್ಗಳನ್ನು ಮುಚ್ಚುವಂತೆ ತಿಳಿಸಿದೆ.
ಇಂದು ರಾತ್ರಿಯಿಂದಲೇ ಈ ಲಾಕ್ಡೌನ್ ಜಾರಿಗೆ ಬರಲಿದೆ. ಇಂತಹ ಸಮಯದಲ್ಲಿ ಸಾರ್ವಜನಿಕ ಓಡಾಟವನ್ನು ಪರೀಕ್ಷಿಸದಿರಲು ಜನಪ್ರಿಯ ಸರ್ಕಾರಕ್ಕೆ ರಾಜಕೀಯ ಒತ್ತಡಗಳಿದ್ದರೆ ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಾವು ಕೂಡ ಸುಮ್ಮನೆ ಕೂರಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರ ಆರೋಗ್ಯ ನಮ್ಮ ಮೊದಲ ಆದ್ಯತೆ. ಕೆಲವರು ನಿರ್ಲಕ್ಷ್ಯದಿಂದಾಗಿ ಸೋಂಕು ಹರಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರನ್ನು ರಕ್ಷಿಸುವುದು ಸಾಂವಿಧಾನಿಕ ಕರ್ತವ್ಯದಿಂದ ನಾವು ದೂರ ಉಳಿಯಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.
ಇಂದು ರಾತ್ರಿಯಿಂದ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಎಲ್ಲಾ ಸರ್ಕಾರಿ ಮತ್ತು ಸಾರ್ವಜನಿಕ ಸಂಸ್ಥೆಗಳು ಬಂದ್ ಆಗಲಿದೆ. ಈ ವೇಳೆ ಹಣಕಾಸು ಸಂಸ್ಥೆಗಳು ಮತ್ತು ಹಣಕಾಸು ಇಲಾಖೆ, ವೈದ್ಯಕೀಯ ಮತ್ತು ಹೆಲ್ತ್ ಕೇರ್ ಸರ್ವೀಸ್, ಕೈಗಾರಿಕಾ ಮತ್ತು ವೈಜ್ಞಾನಿಕ ಸಂಸ್ಥೆಗಳು, ಪುರಸಭೆಯ ಕಾರ್ಯಗಳಯ ಮತ್ತು ಸಾರಿಗೆ ಸೇವೆ ಸಿಗಲಿದೆ.
ಪ್ರಯಾಗ್ರಾಜ್, ಲಕ್ನೋ, ವಾರಾಣಾಸಿ, ಕಾನ್ಫುರ್ ಮತ್ತು ಗೋರಾಖ್ಪುರ ನಗರಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರುವಂತೆ ಹೈ ಕೋರ್ಟ್ ನಿರ್ದೇಶನ ಮಾಡಿದೆ.
ಇದೇ ವೇಳ ವಿವಿಐಪಿ ಶಿಫಾರಸಿನ ಚಿಕಿತ್ಸೆ ಕುರಿತು ಹೈಕೋರ್ಟ್ ಚಾಟಿ ಬೀಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಿಐಟಿ ಶಿಫಾರಸಿನ ಅನ್ವಯ ರೋಗಿಗಳನ್ನು ಆಡ್ಮಿಟ್ ಮಾಡಲಾಗುತ್ತಿದೆ. ಜೊತೆಗೆ ಆಂಟಿ ವೈರಸ್ ರೆಮಿಡಿಸಿವರ್ ಔಷಧಿ ನೀಡಲು ಕೂಡ ಪ್ರಮುಖ ವ್ಯಕ್ತಿಗಳ ಶಿಫಾರಸು ಅಗತ್ಯ ವಾಗಿದೆ ಎಂಬುದು ತಿಳಿದುಬಂದಿದೆ. ವಿವಿಐಪಿಗಳು 12 ಗಂಟೆಯಲ್ಲಿ ಆರ್ಟಿ ಪಿಸಿಆರ್ ಪರೀಕ್ಷಾ ವರದಿ ಪಡೆದರೆ, ಸಾಮಾನ್ಯ ಜನರಿಗೆ ಇದು ತಲುಪಲು ಎರಡ್ಮೂರು ದಿನಗಳವರೆಗೆ ಕಾಯಬೇಕಿದೆ. ಇದರಿಂದ ಸೋಂಕು ಕುಟುಂಬಸ್ಥರಿಗೂ ಹರಡುತ್ತಿದೆ ಎಂದಿದೆ.