ಬೆಂಗಳೂರು,ಏ.19: ರಾಜ್ಯದಲ್ಲಿ ಲಾಕ್ ಡೌನ್ ಮಾಡುವುದಿಲ್ಲ. ಆದರೆ, ರಾತ್ರಿ ಕರ್ಫ್ಯೂವನ್ನು ವಿಸ್ತರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಸೋಂಕು ಹೆಚ್ಚಳ ಹಿನ್ನಲೆ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಸಭೆಯನ್ನು ಇಂದು ನಡೆಸಲಾಯಿತು. ಈ ವೇಳೆ ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಿಎಂ, ರಾಜ್ಯದಲ್ಲಿ ಮತ್ತೊಂದು ಲಾಕ್ ಡೌನ್ ಘೋಷಣೆ ಮಾಡುವುದಿಲ್ಲ ಎಂದಿದ್ದಾರೆ. ಕರ್ಫ್ಯೂ ವಿಸ್ತರಣೆ ಸೇರಿದಂತೆ ಬಿಗಿ ನಿಯಂತ್ರಣದ ಕುರಿತು ನಾಳೆ ತೀರ್ಮಾನಿಸುತ್ತೇವೆ. ರಾಜ್ಯಪಾಲರ ಅಭಿಪ್ರಾಯ ಪಡೆದ ಬಳಿಕ ಅಂತಿಮವಾಗಿ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದರು
ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ ಮತ್ತೊಂದು ಲಾಕ್ಡೌನ್ ಕುರಿತು ರಾಜ್ಯ ಸರ್ಕಾರ ನಿರ್ಧಾರ ಮಾಡುತ್ತದೆ ಎನ್ನಲಾಗಿತ್ತು. ಈ ಕುರಿತು ಮಾತನಾಡಿದ ಅವರು, ಲಾಕ್ಡೌನ್ ಮಾಡುವಂಥ ಪರಿಸ್ಥಿತಿಯಿಲ್ಲ. ನಾಳೆ ಸಭೆ ಬಳಿಕ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಎಂಟು ವಲಯಕ್ಕೆ ಎಂಟು ಸಚಿವರಿದ್ದಾರೆ. ಯಾವುದೇ ಭಯ ಬೇಡ. ನಾಳೆ ಸರ್ವಪಕ್ಷ ಸಭೆ ಬಳಿಕ ಬೆಂಗಳೂರಿಗೆ ಮತ್ತು ರಾಜ್ಯಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಯಿ, ಕೋವಿಡ್ ಸಂದರ್ಭದಲ್ಲಿ ಎಲ್ಲಾ ಜನಪ್ರತಿನಿಧಿಗಳು ರಾಜಕೀಯ ಮೀರಿ ಸಹಕರಿಸಬೇಕು. ಕೋವಿಡ್ ಸಮಯದಲ್ಲಿ ರಾಜಕೀಯ ಬಿಟ್ಟು ಎಲ್ಲರು ಕೋವಿಡ್ ಕುರಿತ ಜನಜಾಗೃತಿ ಮಾಡಬೇಕು. ಸರ್ಕಾರ ತಗೆದುಕೊಳ್ಳುವ ಕ್ರಮಗಳಿಗೆ ಎಲ್ಲಾರೂ ಸಹಕಾರಿಸಬೇಕಿದೆ. ರಾಜಕೀಯ ಮೀರಿ ನಾವು ಕೆಲಸ ಮಾಡಿದಾಗ ಮಾತ್ರ ಈ ಮಾಹಮಾರಿಯನ್ನು ಎದರಿಸಬಹುದು. ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಸಲಾಗುವುದು. ಈ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಸಹ ಭಾಗಿಯಾಗಲಿದ್ದಾರೆ ಎಂದರು.