janadhvani

Kannada Online News Paper

ಸೌದಿ: ಐಸ್‌ಕ್ರೀಂ ಮುಂತಾದ ಆಹಾರ ವಿತರಣಾ ವಾಹನಗಳಲ್ಲಿ ಸಂಪೂರ್ಣ ದೇಶೀಕರಣ

ರಿಯಾದ್: ಮುಂದಿನ ತಿಂಗಳಿನಿಂದ ಸೌದಿ ಅರೇಬಿಯಾದಲ್ಲಿ ಆಹಾರ ವಿತರಣಾ ವಾಹನಗಳಲ್ಲಿ ಸಂಪೂರ್ಣ ದೇಶೀಕರಣ ಜಾರಿಗೆ ಬರಲಿದೆ. ಐಸ್ ಕ್ರೀಮ್, ಪಾನೀಯಗಳು ಮತ್ತು ಆಹಾರವನ್ನು ತಲುಪಿಸುವ ವಾಹನಗಳ ಮೇಲೆ ಸೌದೀಕರಣವನ್ನು ನಡೆಸಲಾಗುತ್ತಿದೆ. ಯೋಜನೆ ಅನುಷ್ಠಾನದಿಂದ ಭಾರತೀಯರು ಸೇರಿದಂತೆ ಸುಮಾರು ಮೂರು ಲಕ್ಷ ವಿದೇಶಿಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಆಹಾರ ವಿತರಣಾ ವಾಹನಗಳ ಸೌದೀಕರಣವು ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ದೇಶೀಕರಣದ ಭಾಗವಾಗಿದೆ. ಐಸ್ ಕ್ರೀಮ್, ಪಾನೀಯಗಳು ಮತ್ತು ಆಹಾರ ಪದಾರ್ಥಗಳಂತಹ ಮೂರು ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುವ ವಾಹನಗಳಲ್ಲಿ ಹೊಸ ದೇಶೀಕರಣವನ್ನು ಜಾರಿಗೆ ತರಲಾಗುವುದು. ಮುಂದಿನ ತಿಂಗಳಿಂದ ಅಂದರೆ ಶವ್ವಾಲ್ ಒಂದರಿಂದ ಈ ಕ್ಷೇತ್ರದಲ್ಲಿ ಸಂಪೂರ್ಣ ಸೌದೀಕರಣವನ್ನು ಜಾರಿಗೆ ತರಲು ಕ್ರಮವಹಿಸಲಾಗಿದೆ.

ಮೂರು ವರ್ಷಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸ್ಥಳೀಯರಿಗೆ ಉದ್ಯೋಗ ನೀಡುವುದು ಇದರ ಉದ್ದೇಶ. ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ಯೋಗದಾತರು ಮತ್ತು ಕಾರ್ಮಿಕರನ್ನು ಪ್ರೋತ್ಸಾಹಿಸುವ ಭಾಗವಾಗಿ,ಈ ವಲಯದಲ್ಲಿ ಹೊಸದಾಗಿ ಪ್ರವೇಶಿಸುವವರ ನಿಗದಿತ ವೇತನವನ್ನು ಸಚಿವಾಲಯ ಭರಿಸಲಿದೆ.ಇದಲ್ಲದೆ, ಉದ್ಯೋಗ ತರಬೇತಿಯನ್ನೂ ನೀಡಲಿದೆ.

ಅದೂ ಅಲ್ಲದೇ,ರೆಸ್ಟೋರೆಂಟ್‌ಗಳಲ್ಲಿ ಶೇಕಡಾ 20 ರಷ್ಟು ಮತ್ತು ಶಾಪಿಂಗ್ ಮಾಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರೆಸ್ಟೋರೆಂಟ್‌ಗಳಲ್ಲಿ 40 ಪ್ರತಿಶತದಷ್ಟು ದೇಶೀಕರಣ ಜಾರಿಗೆ ತರಲಾಗುತ್ತಿದೆ.ಹೊಸ ನಿಯಮವು ಪ್ರತಿ ಶಿಫ್ಟ್‌ಗೆ ನಾಲ್ಕು ಅಥವಾ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ರೆಸ್ಟೋರೆಂಟ್‌ಗಳಿಗೆ ಅನ್ವಯಿಸುತ್ತದೆ.

error: Content is protected !! Not allowed copy content from janadhvani.com