ಬೆಂಗಳೂರು: ಜನರಿದ್ದರೆ ರಾಜ್ಯ, ಜನರಿದ್ದರೆ ಮಾತ್ರ ಆರ್ಥಿಕತೆ. ಮೊದಲು ಜನರನ್ನ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಜನರ ಜೀವದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡ್ತಿವೆ. ಗಂಟೆ ಹೊಡೆಯಿರಿ ಅಂದ್ರು ಗಂಟೆ ಹೊಡೆದ್ವಿ. ದೀಪಹಚ್ಚಿ ಅಂದ್ರು ದೀಪಹಚ್ಚಿದ್ದೆವು. ಚಪ್ಪಾಳೆ ಹೊಡೆಯಿರಿ ಅಂದ್ರು ಚಪ್ಪಾಳೆಯನ್ನೂಹೊಡೆದ್ವಿ. ಲಾಕ್ಡೌನ್ ಮಾಡಿದ್ರು ಫಾಲೋ ಮಾಡಿದ್ವಿ. ಇಷ್ಟೆಲ್ಲಾ ಮಾಡಿದ್ರೂ ಕೊರೊನಾ ನಿಯಂತ್ರಣ ಮಾಡೋಕೆ ಆಗ್ತಿಲ್ಲ.
ಒಂದು ವರ್ಷ ಸರ್ಕಾರಕ್ಕೆ ಸಹಕಾರ ಕೊಟ್ಟಿದ್ದೇವೆ. ಈಗ ಕೈಮೀರಿ ಹೋಗಿದೆ ಅಂತ ಆರೋಗ್ಯ ಸಚಿವರು ಹೇಳ್ತಿದ್ದಾರೆ. ಇವತ್ತಿನ ಪರಿಸ್ಥಿತಿ ನೆನೆದರೆ ಏನಾಗಬೇಡ. ಸರ್ಕಾರ ಇದ್ಯೋ ಇಲ್ವೋ ಗೊತ್ತಾಗ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ಯಾವುದೇ ಫ್ಲಾನ್ ಇಲ್ಲ. ಸಾವಿರ ಬೆಡ್ ಮಾಡಿದ್ರು. ಹೊಟೇಲ್ ವಶಕ್ಕೆ ಪಡೆದ್ರು,ಆದ್ರೂ ಬೆಡ್ ಇಲ್ಲ. ಅತೀ ಹೆಚ್ಚು ಆಸ್ಪತ್ರೆ ನಮ್ಮ ರಾಜ್ಯದಲ್ಲಿವೆ. ದೇಶದಲ್ಲೇ ತಜ್ಞ ವೈದ್ಯರು ನಮ್ಮಲ್ಲಿದ್ದಾರೆ. ಆದರೂ ಸರ್ಕಾರ ಕೈಚೆಲ್ಲಿ ಕೂತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗ್ತಿಲ್ಲ. ಅಧಿಕಾರಿಗಳು ಏನು ಮಾಡ್ತಿದ್ದಾರೆ. ಆಸ್ಪತ್ರೆಗಳಿಗೆ ಎಷ್ಟು ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಸಚಿವರು ರಾಜ್ಯದ ಎಷ್ಟು ಕಡೆ ಭೇಟಿ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೊರೊನಾ ಆರ್ಥಿಕ ಸಮಸ್ಯೆ ಬಗೆ ಹರಿಸಲು ₹20 ಲಕ್ಷ ಕೋಟಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇಲ್ಲಿಯವರೆಗೆ ಯಾರಿಗೆ ಆ ಹಣ ಸಿಕ್ಕಿದೆ..? ಜಿಮ್ಗಳು ನಿಂತುಹೋಗಿವೆ. ವ್ಯಾಪಾರ ಬಿದ್ದುಹೋಗ್ತಿದೆ. ಜಿಎಸ್ಟಿ ಕಟ್ಟುವ ದುಡ್ಡಿಗೂ ಪೆನಾಲ್ಟಿ ಹಾಕ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ. ಸಿಮೆಂಟ್,ಗೊಬ್ಬರದ ಬೆಲೆ ಗಗನಕ್ಕೆ ಹೋಗಿದೆ. ರೈತರು ಇವತ್ತು ಪರದಾಡುತ್ತಿದ್ದಾರೆ. ಹೆಣ್ಣುಮಕ್ಕಳು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಯಾವ ಸಹಾಯಧನ ಸರ್ಕಾರ ನೀಡ್ತಿದೆ..? ಚಾಲಕರಿಗೆ ಸರ್ಕಾರದಿಂದ ನಯಾ ಪೈಸೆ ಸಹಾಯ ಮಾಡಿಲ್ಲ ಎಂದು ಆರೋಪಿಸಿದರು.
ಸರ್ಕಾರ ಜನರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಸರಿಯಾದ ಮಾರ್ಗಸೂಚಿಗಳನ್ನ ತರಬೇಕು. ಶಿಕ್ಷಣ ವಿಚಾರದಲ್ಲಿ ಹೆಚ್ಚಿನ ಗಮನಹರಿಸಬೇಕು. ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಇಲಾಖೆಗಳ ಅಧಿಕಾರಿಗಳನ್ನ ಬಳಸಿಕೊಳ್ಳ ಬೇಕು. ಅಭಿವೃದ್ಧಿ ಕೆಲಸ ನಿಲ್ಲಿಸಿ,ಆರೋಗ್ಯಕ್ಕೆ ಒತ್ತು ಕೊಡಿ. ಕೊರೊನಾ ನಿಯಂತ್ರಣಕ್ಕೆ ಸದ್ಯ 300 ಕೋಟಿ ಹಣ ಮೀಸಲಿಡಿ ಎಂದು ಒತ್ತಾಯಿಸಿದರು.