ಮಂಗಳೂರು: ಪವಿತ್ರ ರಂಜಾನ್‌ನಲ್ಲಿ ಧಾರ್ಮಿಕ ಉಪನ್ಯಾಸ ನೀಡಲು ಆಗಮಿಸಿದ್ದ ಮುತಅಲ್ಲಿಂ (ಧಾರ್ಮಿಕ ವಿದ್ಯಾರ್ಥಿ) ಒಬ್ಬರು ಮಸೀದಿಯಲ್ಲೇ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಗರದ ಹೊರವಲಯದ ಮರಕಡದಲ್ಲಿ ನಡೆದಿದೆ.
ಸುಳ್ಯ ಸಮೀಪದ ಅಜ್ಜಾವರದ ಹಸೈನಾರ್ ಹಾಜಿ-ಝಹುರಾ ದಂಪತಿಯ ಪುತ್ರ ಅಬ್ದುಲ್ ಅಲ್ ಸಿನಾನ್ ಅಜ್ಜಾವರ (20) ಮೃತಪಟ್ಟ ಯುವಕ.
ದರ್ಸ್ ವಿದ್ಯಾರ್ಥಿಗಳು ಸಾಮಾನ್ಯವಾಗಿ ರಮಝಾನ್‌ನಲ್ಲಿ ಧಾರ್ಮಿಕ ಉಪನ್ಯಾಸ (ಉರ್ದಿ) ತರಬೇತಿ ಪಡೆಯಲು ಮಸ್ಜಿದ್’ಗಳಿಗೆ ತೆರಳುವುದು ವಾಡಿಕೆ. ಅದರಂತೆ ಸಿನಾನ್ ಕೂಡ ಶುಕ್ರವಾರ ಮುಸ್ಸಂಜೆ ನಗರದ ಹೊರವಲಯದ ಮರಕಡದ ಜುಮಾ ಮಸೀದಿಗೆ ತೆರಳಿದ್ದರು. ಉಪವಾಸ ವೃತ ತೊರೆದು, ತರಾವೀಹ್ ನಮಾಜ್ ಮುಗಿಸಿ ಉಪನ್ಯಾಸವನ್ನೂ ನೀಡಿದ್ದರು.
ಇಂದು ಬೆಳಗ್ಗೆ ಸಹರಿಗೆ ಎದ್ದು ಊಟ ಮಾಡಿದ ಬಳಿಕ ಊಟದ ತಟ್ಟೆ ತೊಳೆಯುತ್ತಿದ್ದಾಗ ಸಿನಾನ್ ಕುಸಿದು ಬಿದ್ದಿದ್ದರು. ಮರಕಡ ಜುಮಾ ಮಸೀದಿಯ ಖತೀಬ್ ಇಸ್ಹಾಕ್ ಸಖಾಫಿ ಕೂಡ ಸಿನಾನ್‌ನ ಸಂಬಂಧಿಯಾಗಿದ್ದು, ಮೃತ ವಿದ್ಯಾರ್ಥಿಗೆ ಮೂರ್ಛೆರೋಗ (ಫಿಟ್ಸ್) ಇರುವ ಬಗ್ಗೆ ತಿಳಿದಿದ್ದ ಅವರು ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದರು. ಮನೆಯವರ ಸೂಚನೆಯ ಮೇರೆಗೆ ಕುಸಿದು ಬಿದ್ದಿದ್ದ ಸಿನಾನ್‌ನನ್ನು ಅಲ್ಲೇ ಮಲಗಲು ವ್ಯವಸ್ಥೆ ಕಲ್ಪಿಸಿದ್ದರು. ಆದರೆ 8 ಗಂಟೆಯಾದರೂ ಎದ್ದೇಳದ ಕಾರಣ ಮನೆಯವರ ಗಮನಕ್ಕೆ ತರಲಾಯಿತು. ಮತ್ತೆ ಅವರ ಸೂಚನೆಯ ಮೇರೆಗೆ ಇಸ್ಹಾಕ್ ಸಖಾಫಿಯವರು ಸಿನಾನ್‌ನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಸಿನಾನ್ ಮಲಗಿದಲ್ಲೇ ಮೃತಪಟ್ಟಿದ್ದರು.
ಇವರು ಮುಹಿಮ್ಮಾತ್ ಪೂರ್ವ ವಿದ್ಯಾರ್ಥಿ ಆಗಿದ್ದರು, ಮುಹಿಮ್ಮಾತ್ ಹಿಫ್’ಳುಲ್ ಕುರ್ಆನ್ ಕಾಲೇಜಿನಲ್ಲಿ ಕುರ್ಆನ್ ಹಿಫ್’ಳ್ ಮಾಡಿದ್ದರು. ಪ್ರಸ್ತುತ, ಕುಂಬ್ರ ಕೆಐಸಿ ದ್ವಿತೀಯ ತರಗತಿಯ ವಿದ್ಯಾರ್ಥಿಯಾಗಿ ಬಿಕಾಂ ಕಲಿಯುತ್ತಿದ್ದರು. ಓದುವ ಹವ್ಯಾಸದೊಂದಿಗೆ ಪ್ರತಿಭಾವಂತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪ್ರಚಲಿತ ವಿದ್ಯಮಾನದ ಬಗ್ಗೆ ಸಹಪಾಠಿಗಳ ಜೊತೆ ಚರ್ಚೆ ನಡೆಸುತ್ತಿದ್ದರು.
ಹಸೈನಾರ್ ಹಾಜಿ-ಝಹುರಾ ದಂಪತಿಯ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯ ಸಹಿತ ಮೂವರು ಮಕ್ಕಳಲ್ಲಿ ಸಿನಾನ್ ಹಿರಿಯ ಮಗನಾಗಿದ್ದ.