ಹರಿದ್ವಾರ: ಇಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಸೋಂಕಿನಿಂದಾಗಿ ಸಾಧುವೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ಈ ಧಾರ್ಮಿಕದಲ್ಲಿ ಮೇಳದಲ್ಲಿ ಭಾಗಿಯಾದ 80 ಸಾಧು ಸಂತರಲ್ಲಿ ಕೋವಿಡ್ ದೃಢಗೊಂಡಿದೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಈ ಮೇಳ ನಡೆಸಲಾಗುತ್ತಿದೆ ಎಂದು ಹೇಳಿದರೂ ಅನೇಕ ಭಕ್ತರು ಕೋವಿಡ್ ನಿಯಮಾವಳಿಗಳನ್ನು ನಿರ್ಲಕ್ಷಿಸುತ್ತಿರುವುದು ಕಂಡು ಬಂದಿದೆ. ಕಳೆದ 24 ಗಂಟೆಯೊಳಗೆ ಹರಿದ್ವಾರದಲ್ಲಿ 2 ಲಕ್ಷದ 17 ಸಾವಿರ ಹೊಸ ಪ್ರಕರಣ ದಾಖಲಾಗಿದೆ. ಕುಂಭ ಮೇಳ ಆರಂಭವಾದ ದಿನದಿಂದ ಅಂದರೆ, ಏಪ್ರಿಲ್ 1ರಿಂದ 20 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ ಎಂದು ಹರಿದ್ವಾರದ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಕುಂಭ ಮೇಳ ನಡೆಸುವ ಬಗ್ಗೆ ತಜ್ಞರು ಈ ಹಿಂದೆಯೇ ಎಚ್ಚರಿಸಿದ್ದರು. ಅಲ್ಲದೇ ಈ ಕುಂಭ ಮೇಳದ ಕೋವಿಡ್ ಸೂಪರ್ಸ್ಪ್ರೆಡರ್ ಆಗಲಿದೆ ಎಂದು ಕೂಡ ತಿಳಿಸಿದ್ದರು. ಸಾಮಾಜಿಕ ಅಂತರವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಿರುವ ಬಗ್ಗೆ ಅನೇಕ ಆಕ್ಷೇಪಗಳು ವ್ಯಕ್ತವಾಗಿದ್ದು, ಅಲ್ಲದೆ ಈ ಕುಂಭ ಮೇಳವನ್ನು ಮೊಟಕುಗೊಳಿಸುವಂತೆ ಕೂಡ ಅನೇಕರು ಒತ್ತಾಯಿಸಿದ್ದರು. ಈ ನಡುವೆ ಸರ್ಕಾರ ಮಾತ್ರ ಎರಡುವಾರ ಮುಂಚೆ ಈ ಕುಂಭ ಮೇಳವನ್ನು ರದ್ದು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಗಂಗಾ ನದಿಯ ತಟದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಲು ದೇಶದ ಮೂಲೆ ಮೂಲೆಯಿಂದ ಭಕ್ತರು, ಸಂತರು ಆಗಮಿಸುತ್ತಾರೆ. ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುವ ಹಿನ್ನಲೆ ಸ್ನಾನ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿತ್ತು. ಆದರೆ, ಈ ಸಲಹೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಹಿಂದೂ ಅಕಾದಸ್ ಮುಖ್ಯಸ್ಥ ಮಹಾಮಂಡಲೇಶ್ವರ ಕಪಿಲ್ ದೇವ್ ಅವರಿಗೆ ಸೋಂಕು ಕಾಣಿಸಿಕೊಂಡು ಗುರುವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಕುಂಭ ಮೇಳಕ್ಕೆ ಹಾಜರಾಗುವ ಭಕ್ತರು 72 ಗಂಟೆಗಳ ಮುಂಚೆ ಕೊವೀಡ್ ನೆಗಟಿವ್ ವರದಿ ನೀಡಬೇಕು. ಈ ನಡುವೆ ಸೋಮವಾರ ಕುಂಭಮೇಳದಲ್ಲಿ ಭಾಗಿಯಾಗಿದ್ದ ಭಕ್ತರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಸುಮಾರು 2000ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಂಡು ಬಂದಿದೆ.
ಪ್ರತಿನಿತ್ಯ 25 ಸಾವಿರಕ್ಕೂ ಹೆಚ್ಚು ಭಕ್ತರು ಪ್ರತಿನಿತ್ಯ ಕುಂಭ ಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಏ. 27 ರಂದು ನಡೆಯುವ ಪವಿತ್ರ ದಿನದಂದು 2-3 ಮಿಲಿಯನ್ ಜನರು ಭಾಗಿಯಾಗುವ ನಿರೀಕ್ಷೆ ಕೂಡ ಇದೆ.