ರಿಯಾದ್: ಇಂದು (ಏ.11) ರಂಜಾನ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ, ರಂಜಾನ್‌ನ ಮೊದಲ ದಿನವು ಏಪ್ರಿಲ್ 13, ಮಂಗಳವಾರ ಆಗಿರುತ್ತದೆ ಎಂದು ಸೌದಿ ಅರೇಬಿಯಾದ ಚಂದ್ರನ ವೀಕ್ಷಣಾ ಸಮಿತಿ ಭಾನುವಾರ ಸಂಜೆ ಘೋಷಿಸಿದೆ.
ಅದರಂತೆ, ಏಪ್ರಿಲ್ 12, ಸೋಮವಾರ,1442 ಹಿಜ್ರಿಯ ಶಅಬಾನ್ ತಿಂಗಳ ಕೊನೆಯ ಮತ್ತು 30 ನೇ ದಿನವಾಗಿರುತ್ತದೆ.ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ರಂಜಾನ್ ತಿಂಗಳ ಆರಂಭವನ್ನು ಶಅಬಾನ್ನ 29 ನೇ ದಿನದಂದು ರಾತ್ರಿ ಚಂದ್ರ ದರ್ಶನದ ಆಧಾರದಲ್ಲಿ ನಿರ್ಣಯಿಸಲಾಗುತ್ತದೆ.
ಏ.13 ರಂದು ರಂಜಾನ್ ಮೊದಲ ದಿನವಾಗಲಿದ್ದು,ಈ ತಿಂಗಳನ್ನು ಮುಸ್ಲಿಮ್ ಸಮಾಜವು ಬಹಳ ಗೌರವ ಮತ್ತು ಭಕ್ತಿಯಿಂದ ಕಾಣುತ್ತದೆ. ಈ ತಿಂಗಳ ಹಗಲಿನಲ್ಲಿ ವೃತ ಹಿಡಿದು ರಾತ್ರಿಯಲ್ಲಿ ರಂಜಾನ್‌ನ ಪ್ರತ್ಯೇಕ ಪ್ರಾರ್ಥನೆಯಾದ ತರಾವೀಹ್ ನಲ್ಲೂ ಇತರ ಪ್ರಾರ್ಥನೆಗಳಲ್ಲೂ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ.
ರಂಜಾನ್ ಸಾಮಾನ್ಯವಾಗಿ 29 ಅಥವಾ 30 ದಿನಗಳಿರಲಿದೆ. ರಂಜಾನ್‌ನ 29 ನೇ ದಿನ ಶವ್ವಾಲ್ ತಿಂಗಳ ಚಂದ್ರ ದರ್ಶನವು ಇದರ ಅವಧಿಯನ್ನು ನಿರ್ಧರಿಸುತ್ತದೆ.ಅಂದು ಚಂದ್ರ ದರ್ಶನವಾದಲ್ಲಿ ಮರುದಿನ ಈದುಲ್ ಫಿತರ್ ಆಚರಿಸಲಾಗುತ್ತಿದೆ.ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದಿದ್ದಲ್ಲಿ ರಂಜಾನ್ 30 ದಿನ ಪೂರ್ತೀಕರಿಸಿ ಮರುದಿನ ಈದ್ ಆಚರಿಸಲಾಗುತ್ತದೆ.
ಗಲ್ಫ್ ದೇಶಗಳಾದ ಯುಎಇ, ಬಹ್ರೇನ್, ಕುವೈತ್, ಖತಾರ್ ನಲ್ಲೂ ಏ.13 ರಂದು ರಂಜಾನ್ ಆರಂಭ.